ಮೀರತ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮೀರತ್-ಬದೌನ್ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಹಸಮಣೆ ಏರಬೇಕಿದ್ದ ವರ ಸೇರಿದಂತೆ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರನ್ನು ವರ ಸೂರಜ್ ಪಾಲ್ (20), ರವಿ (28), ಆಶಾ (26), ಸಚಿನ್ (22), ಮಧು (20), ಕೋಮಲ್ (15), ಐಶ್ವರ್ಯ (3), ಮತ್ತು ಗಣೇಶ್ (2) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಮದುವೆಗೆ ಬದೌನ್ ಜಿಲ್ಲೆಯ ಸಿರ್ಸೌಲ್ ಗ್ರಾಮಕ್ಕೆ ಹೋಗುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಎಸ್ ಯುವಿ ಚಾಲಕನ ನಿಯಂತ್ರಣ ತಪ್ಪಿ ಜನತಾ ಇಂಟರ್ ಕಾಲೇಜಿನ ಆವರಣದ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದೆ ತೀವ್ರತೆ ಎಷ್ಟಿತ್ತೆಂದರೆ ಇಂಟರ್ ಕಾಲೇಜು ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ವಾಹನದಲ್ಲಿದ್ದವರನ್ನು ರಕ್ಷಿಸಲು ಜೆಸಿಬಿ ಯಂತ್ರಗಳನ್ನು ಬಳಸಬೇಕಾಯಿತು.
ಜುನವೈ ಎಂಬ ಪಟ್ಟಣದ ಬಳಿ ಈ ಅಪಘಾತ ಸಂಭವಿಸಿದೆ.
ಹರ್ಗೋವಿಂಗ್ ಪುರ ಗ್ರಾಮದ 10 ಜನರನ್ನು ಕರೆದೊಯ್ಯುತ್ತಿದ್ದ ಮಹೀಂದ್ರಾ ಬೊಲೆರೊ ಕಾರು, ಬದೌನ್ ಜಿಲ್ಲೆಯ ಸಿರ್ಸೌಲ್ ಗ್ರಾಮಕ್ಕೆ ಹೋಗುತ್ತಿದ್ದ ಮದುವೆ ಮೆರವಣಿಗೆಯ ಭಾಗವಾಗಿ ಈ ಅಪಘಾತ ಸಂಭವಿಸಿದೆ.ಕಾರು ಅತಿ ವೇಗದಲ್ಲಿ ಚಲಿಸುತ್ತಿದ್ದರಿಂದ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದಾಗಿ ಕಾಲೇಜು ಕಟ್ಟಡದ ಒಂದು ಭಾಗಕ್ಕೆ ತೀವ್ರ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹರ್ಗೋವಿಂದ್ಪುರ ನಿವಾಸಿ ಸುಖ್ರಾಮ್ ತಮ್ಮ ಮಗ ಸೂರಜ್ನ ಮದುವೆಯನ್ನು ಏರ್ಪಡಿಸಿದ್ದರು.
ಮದುವೆಗೆ ಹನ್ನೊಂದು ವಾಹನಗಳು ತೆರಳುತ್ತಿದ್ದವು. ಅಪಘಾತಕ್ಕೀಡಾದ ವಾಹನ ಸ್ವಲ್ಪ ದೂರ ಹಿಂದೆಯೇ ಉಳಿದಿತ್ತು. ಜುನವೈ ಸಮೀಪಿಸುತ್ತಿದ್ದಂತೆ, ಎಸ್ ಯುವಿ ನಿಯಂತ್ರಣ ತಪ್ಪಿ ಕಾಲೇಜಿನ ಗೋಡೆಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ವಾಹನ ಗುರುತು ಸಿಗದಷ್ಟು ಛಿದ್ರವಾಗಿದೆ.