ಪಟನಾ: ಬಿಹಾರದ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಗೋಪಾಲ್ ಖೇಮ್ಮಾ ಅವರನ್ನು ಬಳಿ ಬೈಕ್ ನಲ್ಲಿ ಅಗಮಿಸಿದ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಶುಕ್ರವಾರ ರಾತ್ರಿ 11.40ರ ವೇಳೆಗೆ ಪಟನಾದ ಗಾಂಧಿ ಮೈದಾನ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಗೋಪಾಲ್ ಖೇಮ್ಮಾ ಅವರ ಮಗನನ್ನು 6 ವರ್ಷಗಳ ಹಿಂದೆ ಹಾಜಿಪುರದಲ್ಲಿ ಹತ್ಯೆ ಮಾಡಲಾಗಿತ್ತು ಎಂದು ಅವರ ಕುಟುಂಬದವರು ಹೇಳಿದ್ದಾರೆ.
ಖೇಮ್ಮಾ ಅವರು ಬಿಹಾರದ ಅತ್ಯಂತ ಹಳೆಯ ಖಾಸಗಿ ಆಸ್ಪತ್ರೆಗಳಲ್ಲಿ ಒಂದಾದ ಮಗಧ ಆಸ್ಪತ್ರೆಯ ಮಾಲೀಕರಾಗಿದ್ದಾರೆ. ಐಷಾರಾಮಿ ಗಾಂಧಿ ಮೈದಾನ ಪ್ರದೇಶದಲ್ಲಿರುವ ತಮ್ಮ ನಿವಾಸ ಪಣಾಚೆ ಹೋಟೆಲ್ ಬಳಿಯ ಅಪಾರ್ಟ್ ಮೆಂಟ್ ಬಳಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಅಪರಿಚಿತ ದಾಳಿಕೋರ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪಟ್ನಾ ಕೇಂದ್ರದ ಎಸ್ ಪಿ ದೀಕ್ಷಾ ಹೇಳಿದ್ದಾರೆ.
ಸ್ಥಳದಿಂದ ಒಂದು ಗುಂಡು ಮತ್ತು ಕಾರ್ಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಈ ವರ್ಷದ ಕೊನೆಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆರ್ ಜೆಡಿ ಮುಖಂಡ ರಿಷಿ ಮಿಶ್ರಾ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ಹಕ್ಕಿಲ್ಲ. ಗೌರವಾನ್ವಿತ ಮುಖ್ಯಮಂತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.