ಅಮರಾವತಿ: ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ನೇತೃತ್ವದ ಎನ್ ಡಿ ಎ ಸರ್ಕಾರದ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದ್ದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ವೈಎಸ್ ಆರ್ ಸಿಪಿ ಮುಖಂಡ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಗ್ರಹಪಡಿಸಿದ್ದಾರೆ.
ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗುತ್ತಿದೆ ಹಾಗೂ ರಾಜಕೀಯ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಜಕಾರಣಿಗಳು ಮತ್ತು ಜನಸಾಮಾನ್ಯರಿಗೆ ರಕ್ಷಣೆ ಇಲ್ಲವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವಾಗ ಮತ್ತು ಸಂವಿಧಾನವನ್ನು ಉಲ್ಲಂಘಿಸುತ್ತಿರುವಾಗ ರಾಷ್ಟ್ರಪತಿ ಆಳ್ವಿಕೆ ಏಕೆ ಹೇರಬಾರದು? ಎಂದು ಜಗನ್ ಮೋಹನ್ ರೆಡ್ಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಮಾಡಿದ್ದಾರೆ.
ಗುಂಟೂರು ಜಿಲ್ಲೆಯ ಮನ್ನಾವ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ದಲಿತ ಸಮುದಾಯದ ನಾಗಮಲ್ಲೇಶ್ವರ ರಾವ್ ಅವರ ಮೇಲೆ ಹಗಲಿನಲ್ಲೇ ದಾಳಿ ಮಾಡಿರುವುದು ರಾಜ್ಯದಲ್ಲಿ ಉದ್ಭವಿಸಿರುವ ಅರಾಜಕತೆಯನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಟಿಡಿಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿರುವುದಕ್ಕೆ ವೈಎಸ್ ಆರ್ ಸಿಪಿ ಕಾರ್ಯಕರ್ತರ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ ಎಂದೂ ಜಗನ್ ಮೋಹನ್ ರೆಡ್ಡಿ ಆರೋಪ ಮಾಡಿದ್ದಾರೆ.