ಶ್ರೀರಂಗಪಟ್ಟಣ: ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ್ದ ಬೆಂಗಳೂರು ಮೂಲದ ಯುವತಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಎಂಬ ಗ್ರಾಮದ ಸಮೀಪ ನದಿ ಮಧ್ಯದಲ್ಲಿದ್ದ ಮರಕ್ಕೆ ಸಿಲುಕಿಕೊಂಡು ರಾತ್ರಿಯಿಡೀ ಆತಂಕದಲ್ಲಿ ಕಳೆದಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ನಿವಾಸಿ ಪವಿತ್ರಾ (19) ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ಈಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿನ್ನೆ ಸಂಜೆ ನದಿಗೆ ಹಾರಿದ್ದಾರೆ. ಸುಮಾರು ದೂರ ಕೊಚ್ಚಿಕೊಂಡು ಹೋಗಿ ಮರದ ರಂಭೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
ರಾತ್ರಿ ಪೂರ್ತಿ ಅಲ್ಲೇ ಕಾಳ ಕಳೆದಿದ್ದಾರೆ. ಇಂದು ಬೆಳಿಗ್ಗೆ ಕಾಪಾಡಿ ಎಂದು ಕೂಗಿಕೊಂಡಿದ್ದಾರೆ. ಆಗ ಸಮೀಪದಲ್ಲೇ ಇದ್ದ ರೈತರು ಬಂದು ನೋಡಿದಾಗ ಈ ಯುವತಿ ಕಾಣಿಸಿಕೊಂಡಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಕೆರೆ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಉಪಚರಿಸಿ ಮಾಹಿತಿ ಪಡೆದಿದ್ದಾರೆ. ನಂತರ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪೋಷಕರು ಬಂದ ನಂತರ ಯುವತಿಯನ್ನು ಅವರಿಗೆ ಒಪ್ಪಿಸುವುದಾಗಿ ಎಸ್ ಐ ವಿನೋದ್ ಕುಮಾರ್ ತಿಳಿಸಿದ್ದಾರೆ. ನೀರಿನ ಹರಿವು ಸ್ವಲ್ಪ ಹೆಚ್ಚಾಗಿದ್ದರೂ ಯುವತಿ ಕೊಚ್ಚಿಹೋಗುವ ಅಪಾಯವಿತ್ತು ಎಂದು ಪೊಲೀಸರು ಹೇಳಿದ್ದಾರೆ.