ದೇವನಹಳ್ಳಿಯಲ್ಲಿ ಭೂ ಸ್ವಾಧೀನ ಕೈಬಿಡದಿದ್ದರೆ ದೇಶವ್ಯಾಪಿ ಉಗ್ರ ಹೋರಾಟ: ಎಸ್‌ ಕೆಎಂ ಮುಖಂಡ ದರ್ಶನ್‌ ಪಾಲ್ ಎಚ್ಚರಿಕೆ

Most read

ಬೆಂಗಳೂರು: ದೇವನಹಳ್ಳಿಯಲ್ಲಿ ಶೇ.90ರಷ್ಟು ರೈತರು ಜಮೀನು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವಾಗ ಸರ್ಕಾರ ಭೂಮಿಯನ್ನು ಹೇಗೆ ವಶಪಡಿಸಿಕೊಳ್ಳಲು ಸಾಧ್ಯ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಮುಖಂಡ ದರ್ಶನ್‌ ಪಾಲ್ ಪ್ರಶ್ನಿಸಿದ್ದಾರೆ.

ದೇವನಹಳ್ಳಿಯ ಚನ್ನರಾಯಪಟ್ಟಣ ಮೊದಲಾದ ಗ್ರಾಮಗಳಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಬಾರದು ಎಂದು ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೆಹಲಿ ಗಡಿಯಲ್ಲಿ ನಡೆದ ರೈತ ಹೋರಾಟದ ಮುಂಚೂಣಿ ನಾಯಕರೂ ಆದ ಅವರು ಮಾತನಾಡಿ ಯಾವುದೇ ರೈತರ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಲು ಶೇ.70 ರಷ್ಟು ರೈತರ ಒಪ್ಪಿಗೆ ಬೇಕು.‌ ಆದರೆ ದೇವನಹಳ್ಳಿಯಲ್ಲಿ ಶೇ. 90 ರಷ್ಟು ರೈತರು ಜಮೀನು ಕೊಡುವುದಿಲ್ಲ ಎನ್ನುತ್ತಿರುವಾಗ ಸರ್ಕಾರ ಏಕೆ ಜಮೀನು ವಶಪಡಿಸಿಕೊಳ್ಳಲು ಮುಂದಾಗಬೇಕು ಎಂದು ಪ್ರಶ್ನಿಸಿದರು.

ದೇವನಹಳ್ಳಿ ರೈತರು ಕೇವಲ ದೇವನಹಳ್ಳಿಗೆ ಮಾತ್ರ ಸೇರಿದವರಾಗಿಲ್ಲ. ಅವರ ಜತೆ ಎಸ್‌ಕೆಎಂ ಇದೆ. ಎಸ್‌ಕೆಎಂ ಸಂಘಟನೆ ದೇಶದ ಉದ್ದಗಲಕ್ಕೂ ಬೆಳೆದು ಎಲ್ಲ ರಾಜ್ಯದಲ್ಲೂ ಅಸ್ತಿತ್ವದಲ್ಲಿದೆ. ಕರ್ನಾಟಕ ಸರಕಾರ ರೈತರ ಹೋರಾಟಕ್ಕೆ ಮಣಿಯದೇ ಇದ್ದರೆ,  ಈ ಹೋರಾಟವನ್ನು ದೇಶವ್ಯಪಿ ವಿಸ್ತರಿಸುವುದಾಗಿ ಅವರು ಎಚ್ಚರಿಕೆ ನೀಡಿದರು. ರೈತರ ಆಗ್ರಹಕ್ಕೆ ಮಣಿಯದಿದ್ದರೆ ರಾಜ್ಯ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಹೋರಾಟಕ್ಕೆ ಸಂಬಂಧಿಸಿದಂತೆ ಜುಲೈ 20ರಂದು ನಡೆಯುವ ಸಂಯುಕ್ತ ಹೋರಾಟ ಸಭೆಯಲ್ಲಿ ದೇವನಹಳ್ಳಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸುತ್ತೇವೆ.  ಆ ವೇಳೆಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ, ಜುಲೈ 20ರಂದು ನಡೆಯವ ಸಭೆಯಲ್ಲಿ ದೇಶಾದ್ಯಂತ ದೇವನಹಳ್ಳಿ ಹೋರಾಟಕ್ಕೆ ಕರೆ ಕೊಡುತ್ತೇವೆ ಎಂದು ಗುಡುಗಿದರು.

ವಿಮಾನ ನಿಲ್ದಾಣಗಳ ಸಮೀಪದಲ್ಲಿ ಸರಕಾರಗಳು ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ಮಾಡುತ್ತಿವೆ. ಇದರ ವಿರುದ್ಧ ನಮ್ಮ ಧ್ವನಿ ಎಂದಿಗೂ ಇರುತ್ತದೆ ಎಂದು ಅವರು  ಹೇಳಿದರು.

ಸಂಯಕ್ತ ಕಿಸಾನ್‌ ಮೋರ್ಚಾದ ಪರವಾಗಿ ಇಲ್ಲಿಗೆ ಬಂದಿದ್ದೇನೆ. ದೇವನಹಳ್ಳಿಯ ಸಾವಿರಾರು ಜನ ಭೂಸ್ವಾದೀನ ವಿರೋದಿಸಿ 1185ದಿನಗಳಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಬೆಂಬಲ ಕೊಡಲು ನನಗೆ ಹೆಮ್ಮೆಯಾಗುತ್ತದೆ ಎಂದರು.

2013ರಲ್ಲಿ ಜಾರಿಗೆ ತರಲಾದ ಭೂ ಸ್ವಾಧೀನ ಕಾಯಿದೆಯನ್ನು ಅನೇಕ ರಾಜ್ಯ ಸರಕಾರಗಳು ಅಂಗಿಕರಿಸಿವೆ. ಸರಕಾರ ಕೈಗಾರಿಕೆಗಳ ಉದ್ದೇಶಕ್ಕೆ ಸ್ವಾಧಿನ ಮಾಡಿಕೊಳ್ಳಬೇಕಾದರೆ, ಶೇ. 70ರಷ್ಟು ಜನ ರೈತರು ಒಪ್ಪಿಗೆ ಪಡೆಯಬೇಕು ಮತ್ತು ಜೀವನ ಭದ್ರತೆ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಳ್ಳಬೇಕು ಎಂದು ಹೇಳುತ್ತದೆ.  ಆದರೆ ದೇವನಹಳ್ಳಿಯಲ್ಲಿ ಶೇ.80ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದಾರೆ. ರೈತರ ಒಪ್ಪಿಗೆ ಇಲ್ಲದೇ ಒಂದಿಂಚೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಪಡಿಸಿದರು.

ದೇವನಹಳ್ಳಿಯಲ್ಲಿ ಮೂರು ವರ್ಷದ ಸುದೀರ್ಘ ಹೋರಾಟ ಎಂದರೆ ಕಡಿಮೆ ಸಮಯವಲ್ಲ. ಈ ಸುದೀರ್ಘವಾದ ಹೋರಾಟಕ್ಕೆ ಸಂಯುಕ್ತ ಹೋರಾಟ ಬೆಂಬಲ ನೀಡುತ್ತಿದೆ. ಇದರ ಭಾಗವಾಗಿ ರೈತರು ಒಂದಿಂಚು ಭೂಮಿಯನ್ನು ಕೊಡುವುದಿಲ್ಲ ಎಂದು ಒಗ್ಗಟ್ಟಾಗಿ ನಿಂತಿರುವುದಕ್ಕೆ  ಅಭಿನಂದನೆ ಸಲದಲಿಸುತ್ತೇನೆ. ಇಲ್ಲಿರುವ ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ರೈತರು ತರಕಾರಿ, ಹಣ್ಣು ಹಂಪಲ ಬೆಳೆಯುತ್ತಿದ್ದಾರೆ. ಅದನ್ನು ಈಗ ಕಿತ್ತುಕೊಳ್ಳಲು ಹೊರಟಿದೆ. ಈಗ ಒಂದಿಂಚೂ ಭೂಮಿಯನ್ನು ಕೊಡುವುದಿಲ್ಲ ಎಂದು ತೀರ್ಮಾನ ಮಾಡಿರುವುದು ಸಂತೋಷ ಸಂಗತಿ ಎಂದರು.

ಮೋದಿ ಸರಕಾರ ಸುಗ್ರೀವಾಜ್ಞೆ ತರುವುದನ್ನು ವಿರೋಧಿಸಿ 2020ರಲ್ಲಿ ದೆಹಲಿಯಲ್ಲಿ ರೈತಸಂಘಟನೆಗಳ ಒಕ್ಕೂಟ ಹೋರಾಟ ನಡೆಸಲು ತೀರ್ಮಾನ ಮಾಡುತ್ತದೆ.  ಈ ಕಾನೂನಿನ ವಿರುದ್ಧ 13 ತಿಂಗಳ ಸುದೀರ್ಘ ಹೋರಾಟ ಮಾಡಿದಕ್ಕೆ ಮೋದಿ ಸರಕಾರ ಕೃಷಿ ವಿರೋದಿ ಕಾನೂನುಗಳನ್ನು ವಾಪಸ್ಸು ಪಡೆದುಕೊಂಡಿತು. ಅದೇ ಉತ್ಸಾಹದಲ್ಲಿ ದೇವನಹಳ್ಳಿಯಲ್ಲೂ ಹೋರಾಟ ನಡೆಯುತ್ತಿದ್ದು, ನಮ್ಮೆಲ್ಲರ ಬೆಂಬಲ ಇರುತ್ತದೆ ಎಂದು ಘೋಷಿಸಿದರು.

ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುವಾಗ, ಪಂಜಾಬ್‌ ನಲ್ಲಿ ಕಾಂಗ್ರೆಸ್‌ ಸರಕಾರ ಇತ್ತು. ಆಗ ಬಿಜೆಪಿ ಸರಕಾರ ರೈತರ ವಿರುದ್ಧ ದಾಳಿ ಮಾಡುತ್ತಿತ್ತು. ಪಂಜಾಬ್‌ ಸರಕಾರ ನೈತಿಕ, ಹಣಕಾಸು ಸೇರಿದಂತೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಿತ್ತು.. ಆ ಹೋರಾಟದಲ್ಲಿ 700 ಜನ ರೈತರು ಪ್ರಾಣ ಕಳೆದುಕೊಂಡರು.  ಪ್ರಾಣ ಕಳೆದುಕೊಂಡ ರೈತರಿಗೆ ಎಲ್ಲರಿಗೂ ತಲಾ 5 ಲಕ್ಷಪರಿಹಾರ  ಮತ್ತು ಮನೆಗೊಂದು ಸರಕಾರದ ಕೆಲಸ ಕೊಡುತ್ತೇವೆ ಎಂದು ಘೋಷಣೆ ಮಾಡಿತ್ತು. ಅದರೆ ಕರ್ನಾಟಕದಲ್ಲಿಯೂ ಕಾಂಗ್ರೆಸ್‌ ಸರ್ಕಾರವಿದ್ದು,  ಏಕೆ  ಹೀಗೆ ವರ್ತಿಸುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.  

ದೆಹಲಿಯ ಗಡಿಯಲ್ಲಿ ನಡೆದ ರೈತರ ಹೋರಾಟಕ್ಕೆ ರಾಹುಲ್‌ ಗಾಂದಿ ಬೆಂಬಲ ನೀಡಿದ್ದರು. ಸಂಯುಕ್ತ ಕಿಸಾನ್‌ ಮೋರ್ಚಾ ಸಂಘಟನೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ವಿಸ್ತರಿಸಿದೆ.  ದೇವನಹಳ್ಳಿಯ ಈ ಹೋರಾಟಕ್ಕೆ ಮಣಿದು, ರೈತರ ಭೂಮಿ ಪಡೆದುಕೊಳ್ಲೂವುದಿಲ್ಲ ಎಂದು ಸರ್ಕಾರ ಘೋಷಣೆ ಮಾಡದೆ ಇದ್ದರೆ, ದೇಶಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಇಲ್ಲವೇ ದೇಶದ ಉದ್ದಗಲಕ್ಕೂ ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ ಸರಕಾರ ಕೂಡಲೇ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ  ಎಂದು ಘೋಷಣೆ ಮಾಡಿ ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ರಾಜ್ಯ ಸರಕಾರ ಜನರನ್ನು ಬೆದರಿಸುತ್ತಿದೆ. ಹೋರಾಟಗಾರರ ವಿರುದ್ಧ ಪೊಲೀಸರನ್ನು ಛೂ ಬಿಡಲಾಗುತ್ತಿದೆ. ರಾಜ್ಯ ಸರಕಾರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಮತ್ತು ಯಶಸ್ವಿಯೂ ಆಗುತ್ತದೆ ಎಂದು ಪಾಲ್‌ ಅವರು ವಿಶ್ವಾ ಸ ವ್ಯಕ್ತಪಡಿಸಿದರು.

More articles

Latest article