ಸಿಎಸ್‌ ಶಾಲಿನಿ ರಜನೀಶ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಸದಸ್ಯ ರವಿಕುಮಾರ್‌ ಸದಸ್ಯತ್ವ ರದ್ದುಗೊಳಿಸಲು ಆಗ್ರಹ

Most read

ಬೆಂಗಳೂರು:  ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಮಾನಹಾನಿ ಹೇಳಿಕೆ ನೀಡಿರುವ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಬಿ.ಕೆ.ಹರಿಪ್ರಸಾದ್‌, ನಾಗರಾಜ ಯಾದವ್‌, ಬಿಲ್ಕಿಸ್‌ ಬಾನು, ಮಲ್ಲಾಜಮ್ಮ, ರಾಮೋಜಿಗೌಡ, ಡಿಟಿ ಶ್ರೀನಿವಾಸ್‌ ಮತ್ತು ರಮೇಶ್‌ ಬಾಬು ಉಪಸ್ಥಿತರಿದ್ದರು.

 ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಮಹಿಳಾ ಐ.ಎ.ಎಸ್ ಅಧಿಕಾರಿ ಶಾಲಿನಿ ರಜನೀಶ್‌ರವರ ಬಗ್ಗೆ ಮಾನಹಾನಿ, ಅಸಭ್ಯ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿರುತ್ತಾರೆ. ಅವರ ಹೇಳಿಕೆಯನ್ನು ಖಂಡಿಸಿ ದೂರು ಸಲ್ಲಿಸುತ್ತಿದ್ದೇವೆ. ಅವರ ಹೇಳಿಕೆ ಸಾರ್ವಜನಿಕವಾಗಿ ಮತ್ತು ಮಾಧ್ಯಮ/ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಂಡಿದ್ದು, ಅಧಿಕಾರಿಕ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿ ವ್ಯಕ್ತಿತ್ವವನ್ನು ಅವಹೇಳನಗೊಳಿಸುವ ಕೆಲಸವಾಗಿದೆ. ಈ ರೀತಿಯ ಹೇಳಿಕೆಗಳು ಸರ್ಕಾರದ ಅತೀ ಉನ್ನತ ಪದವಿಯ ನಾಗರಿಕ ಸೇವಾಧಿಕಾರಿಗಳ ಧೈರ್ಯ ಮತ್ತು ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ ಎಂದು ಮನವಿ ಪತ್ರದಲ್ಲಿ ವಿವಿರಿಸಿದ್ದಾರೆ.

ಈ ನಡೆ ಸಂಸತ್ತಿನ ನೀತಿ ಸಂಹಿತೆಯ ನಿಯಮಗಳಿಗೆ ವಿರುದ್ಧವಾಗಿದ್ದು, ಮಹಿಳಾ ಅಧಿಕಾರಿಗಳಿಗೆ ಅಗೌರವ ಪ್ರದರ್ಶಿಸುವ ಪ್ರವೃತ್ತಿಯಾಗಿರುತ್ತದೆ. ವ್ಯಕ್ತಿಗತ ನಿಂದನೆ ಮಾಡುವ ಮೂಲಕ, ಸಮಾಜದಲ್ಲಿ ಕೀಳು ಅಭಿರುಚಿ ಎಬ್ಬಿಸುವ ಈ ಹೇಳಿಕೆ ವಿಧಾನ ಪರಿಷತ್ ಸದಸ್ಯನ ಸ್ಥಾನಕ್ಕೆ ಒಪ್ಪದಂತಹ ಹಾಗೂ ಪರಿಷತ್ತಿನ ಗೌರವವನ್ನು ಕುಗ್ಗಿಸುವ ಪ್ರವೃತ್ತಿಯಾಗಿರುತ್ತದೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿಧಾನ ಪರಿಷತ್‌ನ ನಿಯಮಗಳು ಹಾಗೂ ನೈತಿಕ ಮಾರ್ಗಸೂಚಿಗಳ ಪ್ರಕಾರ ರವಿಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು  ಹಾಗೂ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಈ ಮೂಲಕ ಸಾರ್ವಜನಿಕ ಸೇವೆಯ ಗೌರವ ಮತ್ತು ಪರಿಷತ್ತಿನ ಪವಿತ್ರತೆಯನ್ನು ಕಾಪಾಡಬೇಕು ಎಂದು ಕೋರಿದ್ದಾರೆ.

More articles

Latest article