ಬೆಂಗಳೂರು: ಅಂಧ್ಯತ್ವ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದ ಆಶಾಕಿರಣ ಯೋಜನೆಯಡಿ ರಾಜ್ಯಾದ್ಯಂತ 393 ಶಾಶ್ವತ ದೃಷ್ಟಿ ಕೇಂದ್ರಗಳಿಗೆ ಇಂದು ಚಾಲನೆ ನೀಡಲಾಗಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ದೃಷ್ಟಿ ಕೇಂದ್ರ ಉದ್ಘಾಟಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ರಾಜ್ಯದ 393 ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಏಕಕಾಲಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಆಶಾಕಿರಣ ಯೋಜನೆ ನಮ್ಮ ಸರ್ಕಾರದ ದೃಷ್ಟಿ ಗ್ಯಾರಂಟಿ ಯೋಜನೆ ಎಂದು ವಿಶ್ಲೇಷಿಸಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಣ್ಣಿನ ಆರೈಕೆಯಲ್ಲಿ ಇಂದು ಶಾಶ್ವತ ದೃಷ್ಟಿ ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ತೆರೆಯಲಾಗಿದೆ. ನಾನು ಕೂಡ ಇಂದು ದೃಷ್ಟಿ ಕೇಂದ್ರದಲ್ಲಿ ಕಣ್ಣಿನ ತಪಾಸಣೆ ನಡೆಸಿಕೊಂಡಿದ್ದೇನೆ. ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಶಾಕಿರಣ ಯೋಜನೆಯನ್ನು ಮರುವಿನ್ಯಾಸಗೊಳಿಸಿದ್ದು, ನಿರಂತರವಾಗಿ ಕಣ್ಣಿನ ಆರೋಗ್ಯ ಸೇವೆ ಒದಗಿಸುವತ್ತ 393 ಶಾಶ್ವತ ಆಶಾಕಿರಣ ದೃಷ್ಟಿ ಕೇಂದ್ರಗಳನ್ನ ತೆರೆಯಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದ್ದು, ದೃಷ್ಟಿದೋಷ ಹೊಂದಿದವರು ತಪಾಸಣೆ ಮಾಡಿಸಿಕೊಂಡು, ಉಚಿತವಾಗಿ ಕನ್ನಡಕಗಳನ್ನ ಪಡೆಯಬಹುದಾಗಿದೆ. ಅಲ್ಲದೇ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಸಲಾಗುತ್ತದೆ ಎಂದು ಹೇಳಿದರು.
ಕಣ್ಣಿನ ಆರೈಕೆಗೆ ರಾಜ್ಯ ಸರ್ಕಾರ ಜಾರಿಗೆ ತಂದ ಆಶಾಕಿರಣ ಒಂದು ಮಾದರಿ ಯೋಜನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ. ಯೋಜನೆಯನ್ನು ಅಧ್ಯಯನ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಕರ್ನಾಟಕಕ್ಕೆ ತಂಡ ಕಳುಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯ ಅಗತ್ಯ ಇದೆ. ಈ ನಿಟ್ಟಿನಲ್ಲಿ ತಜ್ಞರ ತಂಡ ವರದಿ ಸಿದ್ಧಪಡಿಸುತ್ತಿದ್ದು, ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ನೀತಿಯನ್ನು ಶೀಘ್ರದಲ್ಲಿಯೇ ಜಾರಿಗೆ ತರುವುದಾಗಿ ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) 11 ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ 5 ಕೇಂದ್ರಗಳು Sight Savers India ರವರ ಸಿಎಸ್‌ಆರ್ ಸಹಭಾಗಿತ್ವದಲ್ಲಿ ಮಾನವ ಸಂಪನ್ಮೂಲ, ಉಪಕರಣಗಳು ಹಾಗೂ ಕನ್ನಡಕಗ ವಿತರಣೆಗಳ ಸೇವೆಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ.
OneSight Essilor Luxottica Foundation ಸೇರಿದಂತೆ ಒಟ್ಟು 13 ಅಶಾಕಿರಣ ದೃಷ್ಟಿ ಕೇಂದ್ರಗಳು ವಿವಿಧ ಸಿಎಸ್‌ಆರ್ ಪಾಲುದಾರರ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿದೆ.
ಆಶಾಕಿರಣ ಕಾರ್ಯಕ್ರಮದ ಎರಡು ಹಂತಗಳಲ್ಲಿ 8 ಜಿಲ್ಲೆಗಳಲ್ಲಿ ಒಟ್ಟು 1.40 ಕೋಟಿ ಜನರು ಪ್ರಾಥಮಿಕ ನೇತ್ರ ತಪಾಸಣೆ ಒಳಗಾಗಿದ್ದು, ಇವರಲ್ಲಿ 24.50 ಲಕ್ಷ ಜನರಿಗೆ ಹೆಚ್ಚಿನ ನೇತ್ರ ತಪಾಸಣೆಗೆ ಸಂಬಂಧಿಸಿದಂತೆ ತೊಂದರೆಗಳಿರುವುದು ಪತ್ತೆಯಾಗಿ, ಇವರನ್ನು ದ್ವಿತೀಯ ಹಂತದ ನೇತ್ರ ತಪಾಸಣೆಗೆ ಒಳಪಡಿಸಲಾಗಿರುತ್ತದೆ. 4.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದ್ದು ಉಳಿದ ಕನ್ನಡಕಗಳನ್ನು ಆಶಾಕಿರಣ ದೃಷ್ಟಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಹಾಗು ಒಟ್ಟು 1.05 ಲಕ್ಷ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.