ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸವಾದ ರಾಜ್ ನಿವಾಸ ಮಾರ್ಗದಲ್ಲಿರುವ ಬಂಗಲೆ- 1ರ ನವೀಕರಣಕ್ಕೆ ರೂ.60 ಲಕ್ಷದ ಟೆಂಡರ್ ಕರೆಯಲಾಗಿದೆ. ಇದೇ ತಿಂಗಳು ನಡೆಯಲಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿದೆ.
ಮುಖ್ಯಮಂತ್ರಿ ರೇಖಾ ಅವರಿಗೆ ಎರಡು ಬಂಗಲೆಗಳು ಮಂಜೂರಾಗಿದ್ದು, ಒಂದರರಲ್ಲಿ ಅವರು ಉಳಿಯಲಿದ್ದರೆ ಮತ್ತೊಂದನ್ನು ಗೃಹ ಕಚೇರಿಯಾಗಿ ಬಳಸಿಕೊಳ್ಳಲಿದ್ದಾರೆ.
ಒಟ್ಟು ರೂ.60 ಲಕ್ಷದ ಈ ಟೆಂಡರ್‌ನಲ್ಲಿ ರೂ.9.3 ಲಕ್ಷದ ಐದು ಟಿ.ವಿ.ಗಳ ಅಳವಡಿಕೆ, ರೂ.7.7 ಲಕ್ಷದಲ್ಲಿ 14 ಹವಾನಿಯಂತ್ರಿತ ಸಾಧನ, ರೂ.5.74 ಲಕ್ಷದ 14 ಸಿಸಿಟಿವಿ ಕ್ಯಾಮೆರಾ ಹಾಗೂ ರೂ.2 ಲಕ್ಷ ಮೌಲ್ಯದ ಯುಪಿಎಸ್ ಅಳವಡಿಸಬೇಕಾಗಿದೆ.
ರಿಮೋಟ್ ಇರುವ 23 ಫ್ಯಾನ್ ಗಳಿಗೆ ರೂ.1.8 ಲಕ್ಷ, ಟೋಸ್ಟ್ ತಯಾರಿಸುವ ಗ್ರಿಲ್ ಗೆ ರೂ.85 ಸಾವಿರ, ಆಟೊಮ್ಯಾಟಿಕ್ ವಾಷಿಂಗ್ ಮಷಿನ್ ಗೆರೂ.77 ಸಾವಿರ, ಪಾತ್ರೆ ತೊಳೆಯುವ ಯಂತ್ರಕ್ಕೆ ರೂ.60 ಸಾವಿರ, ಅಡುಗೆ ಅನಿಲ ಒಲೆಗೆ ರೂ.63 ಸಾವಿರ, ಮೈಕ್ರೊವೇವ್ ಓವನ್ ಗೆ ರೂ.32 ಸಾವಿರ ಮತ್ತು ಆರು ಗೀಸರ್ ಅಳವಡಿಸಲು ರೂ.91 ಸಾವಿರ ನಿಗದಿಪಡಿಸಲಾಗಿದೆ.
ಇದರಲ್ಲಿ ಗೋಡೆಗೆ ಅಳವಡಿಸುವ, ತೂಗುಹಾಕುವ ದೀಪಗಳು ಮತ್ತು ಮೂರು ದೊಡ್ಡ ಝೂಮರ್ ಸೇರಿದಂತೆ ಒಟ್ಟು 115 ದೀಪಗಳನ್ನು ಅಳವಡಿಸಬೇಕಿದೆ. ಇದಕ್ಕಾಗಿ ರೂ.6.03 ಲಕ್ಷ ನಿಗದಿಪಡಿಸಲಾಗಿದೆ.
ಕೇಜ್ರಿವಾಲ್ ಇದ್ದ ಬಂಗಲೆ ಬೇಡ ಎಂದ ರೇಖಾ ಗುಪ್ತಾ:
ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿದ್ದ ರಾಷ್ಟ್ರ ರಾಜಧಾನಿಯ ಫ್ಲಾಗ್ ಸ್ಟಾಫ್ ರಸ್ತೆಯ ನಂ. 6ನೇ ಬಂಗಲೆಯಲ್ಲಿ ಇರಲು ರೇಖಾ ನಿರಾಕರಿಸಿದ್ದಾರೆ. ಈ ಬಂಗಲೆಯೂ ನವೀಕರಣಗೊಂಡಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಆರೋಪಿಸಿದ್ದರು.