ಸುಲ್ತಾನಪುರ: ಲೋಕಸಭೆ ವಿಪಕ್ಷ ನಾಯಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಜುಲೈ 14ಕ್ಕೆ ಮುಂದೂಡಿದೆ. 2018ರಲ್ಲಿ ಬಿಜೆಪಿ ಮುಖಂಡ ವಿಜಯ್ ಮಿಶ್ರಾ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಮಿಶ್ರಾ ದೂರು ನೀಡಿದ್ದರು. ದೂರುದಾರರ ಪರವಾಗಿ ಹಾಜರಾಗಿದ್ದ ವಕೀಲ ಸಂತೋಶ್ ಕುಮಾರ್ ಪಾಂಡೆ, ಸಾಕ್ಷಿ ವಿಚಾರಣೆಗೆ ಗೈರಾಗಿದ್ದರಿಂದ ವಿಚಾರಣೆ ಮುಂದೂಡಲಾಯಿತು ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2023ರಲ್ಲಿ ರಾಹುಲ್ ಗಾಂಧಿ ವಿರುದ್ಧ ವಾರಂಟ್ ಹೊರಡಿಸಿತ್ತು. ಬಳಿಕ 2024ರ ಫೆಬ್ರುವರಿಯಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ನಂತರ ತಲಾ ರೂ.25 ಸಾವಿರ ಮೌಲ್ಯದ ಇಬ್ಬರ ಶ್ಯೂರಿಟಿಯ ಮೇಲೆ ಜಾಮೀನು ಪಡೆದಿದ್ದರು. ಜುಲೈ 26ರಂದು ರಾಹುಲ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ತಾವು ನಿರಾಪರಾಧಿ ಎಂದು ಪ್ರತಿಪಾದಿಸಿದ್ದ ರಾಹುಲ್ ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂದು ಆಪಾದಿಸಿದ್ದರು.