ಹೈದರಾಬಾದ್: ಸಿಗಾಚಿ ಇಂಡಸ್ಟ್ರೀಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ನೀಡುವುದಾಗಿ ಕಂಪನಿಯು ಘೋಷಿಸಿದೆ. ಈ ದುರಂತದಲ್ಲಿ 40 ಸದಸ್ಯರು ಮೃತಪಟ್ಟಿದ್ದು, 33ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳ ವೈದ್ಯಕೀಯ ವೆಚ್ಚ ಭರಿಸುವುದಾಗಿ ಕಂಪನಿಯು ಪ್ರಕಟಣೆ ಮೂಲಕ ತಿಳಿಸಿದೆ.
ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‌ನಲ್ಲಿ ಸೋಮವಾರ ಸ್ಫೋಟ ಸಂಭವಿಸಿತ್ತು.
ಮೃತರ ಕುಟುಂಬಗಳಿಗೆ ತಲಾ ರೂ.1 ಕೋಟಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರವು ಕಂಪನಿಯ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಲಿದೆ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದರು. ಗಂಭೀರವಾಗಿ ಗಾಯಗೊಂಡವರಿಗೆ ತಲಾ ರೂ.10 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದವರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡುವುದಾಗಿ ಅವರು ಪ್ರಕಟಿಸಿದ್ದರು.
ರಿಯಾಕ್ಟರ್‌ನಲ್ಲಿ ಸಂಭವಿಸಿದ ಸ್ಫೋಟದಿಂದ ದುರಂತ ಸಂಭವಿಸಿಲ್ಲ. ತನಿಖೆಗಳ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದು, ಕಾರ್ಖಾನೆಯನ್ನು 90 ದಿನಗಳವರೆಗೆ ಮುಚ್ಚಲಾಗಿದೆ ಎಂದು ಸಿಗಾಚಿ ಹೇಳಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸಿಗಾಚಿ ಕಂಪನಿಯ ವಿರುದ್ಧ ಎಫ್ ಐ ಆರ್ ದಾಖಲಿಸಿದೆ.