2013ರಲ್ಲಿ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ನಡೆದಿದ್ದ ಸ್ಫೋಟದ ಶಂಕಿತ ಉಗ್ರನ ಬಂಧನ

Most read

ಚೆನ್ನೈ: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದ ಎದುರು 2013ರಲ್ಲಿ ನಡೆದ ಬಾಂಬ್‌ ಸ್ಫೋಟ ಸೇರಿದಂತೆ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ನಡೆದ ಹಲವು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ನಗೂರ್‌ ಅಬೂಬಕರ್‌ ಸಿದ್ದಿಕ್‌ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2013ರ ಏಪ್ರಿಲ್‌ 17ರಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ನಡೆದ ಸ್ಫೋಟದಲ್ಲಿ 16 ಮಂದಿ ಗಾಯಗೊಂಡಿದ್ದರು.

ಖಚಿತ ಮಾಹಿತಿ ಆಧರಿಸಿ ತಮಿಳುನಾಡು ವಿಶೇಷ ಪೊಲೀಸ್‌ ತಂಡವು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಸಿದ್ದಿಕ್‌ ನನ್ನು ವಶಕ್ಕೆ ಪಡೆದಿದ್ದು,  ಈತನ ಸಹಚರ ತಿರುನೆಲ್ವೇಲಿ ಮಹಮದ್‌ ಅಲಿ ಎಂಬಾತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2011ರಲ್ಲಿ ಬಿಜೆಪಿ ಮುಖಂಡ ಎಲ್‌.ಕೆ ಅಡ್ವಾಣಿ ಅವರ ರಥಯಾತ್ರೆ ಮಧುರೈ ಮೂಲಕ ಸಾಗುವಾಗ, ರಥಯಾತ್ರೆ ಮಾರ್ಗದಲ್ಲಿ ಬಾಂಬ್‌ ಇರಿಸಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಈತನ ಮೇಲಿದೆ. 1995ರಲ್ಲಿ ಚೆನ್ನೈನ ಹಿಂದು ಮುನ್ನಣಿ ಕಚೇರಿ ಎದುರು ನಡೆದ ಸ್ಫೋಟ, 1999ರಲ್ಲಿ ಚೆನ್ನೈನ  ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ 7 ಕಡೆ ಬಾಂಬ್‌ ಇರಿಸಿದ ಪ್ರಕರಣಗಳಲ್ಲಿಯೂ ಸಿದ್ದಿಕ್‌ ಪಾತ್ರ ಇರುವುದು ಸಾಬೀತಾಗಿದೆ.

1998ರಲ್ಲಿ ಬಿಜೆಪಿ ಮುಖಂಡ ಎಲ್‌.ಕೆ ಅಡ್ವಾಣಿ ಭಾಗವಹಿಸಿದ  ಕೊಯಮತ್ತೂರು ರ್‍ಯಾಲಿಯಲ್ಲಿ  ಸರಣಿ  ಬಾಂಬ್‌ ಸ್ಫೋಟದ ಹೊಣೆಯನ್ನು ಮಹಮದ್‌ ಅಲಿ ಖಾನ್‌ ಸ್ಥಾಪಿತ  ‘ಆಲ್‌–ಉಮ್ಮ’ ಸಂಘಟನೆ ಹೊತ್ತುಕೊಂಡಿತ್ತು. ಈ  ಸ್ಫೋಟದಲ್ಲೂ ಸಿದ್ದಿಕ್‌ ಬಾಗಿಯಾಗಿದ್ದ. ಮೂರು ದಶಕಗಳಿಂದ ತಪ್ಪಿಸಿಕೊಂಡಿದ್ದ ಈತ ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article