ಆರ್‌ ಆರ್‌ ನಗರದಲ್ಲಿ 58.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳ ಬಂಧನ

Most read

ಬೆಂಗಳೂರು: ಮನೆ ಮಾಲೀಕರು ಇಲ್ಲದ ಸಮಯ ನೋಡಿಕೊಂಡು ಮನೆಯ ಪ್ಯಾಸೇಜ್‌ ಹತ್ತಿ ಅಡುಗೆ ಮನೆಯ ಯುಟಿಲಿಟಿ ಡೋರ್‌ ಅನ್ನು ಮುರಿದು ಒಳನುಗ್ಗಿ  ಚಿನ್ನಾಭರಣಗಳನ್ನು ಕಳವು ಮಾಡಿದ್ದ ತಮಿಳುನಾಡು ಮೂಲದ ಆರೋಪಿ ಸೇರಿ ಇಬ್ಬರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 58.60 ಲಕ್ಷ ರೂ. ಮೌಲ್ಯದ 537 ಗ್ರಾಂ ಚಿನ್ನಾಭರಣ, 7 ಕೆಜಿ ಬೆಳ್ಳಿವಸ್ತುಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಇಎಂಎಲ್‌ 5ನೇ ಹಂತದಲ್ಲಿ ವಾಸವಿರುವ ದಂಪತಿ ಪ್ರೆಸ್ಟೀಜ್‌ ಬಾಗ್ಮನೆ ಅಪಾರ್ಟ್‌ ಮೆಂಟ್‌ ನಲ್ಲಿರುವ ಮಗನ ಮನೆಗೆ ಹೋಗಿದ್ದರು. ನಂತರ ಮರಳಿ ಬಂದು ನೋಡಿದಾಗ ಕೊಠಡಿಯ ಬೀರು ತೆರೆದಿದ್ದು, ನಗದು, ಚಿನ್ನಾಭರಣ ಹಾಗೂ ಬೆಳ್ಳಿವಸ್ತುಗಳು  ಕಳವಾಗಿರುವುದು ಕಂಡುಬಂದಿದೆ. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಬಿಇಎಂಎಲ್‌ 5ನೇ ಹಂತದ 2ನೇ ಕ್ರಾಸ್‌ ನಲ್ಲಿ  ಒಬ್ಬನನ್ನು ಮತ್ತು ರಾಜರಾಜೇಶ್ವರಿ ದೇವಸ್ಥಾನದ ಬಳಿ ಮತ್ತೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸುದೀರ್ಘವಾಗಿ ವಿಚಾರಣೆ ನಡೆಸಿದಾಗ, ಕಳವು ಮಾಡಿದ್ದ ಚಿನ್ನಾ ಹಾಗೂ ಬೆಳ್ಳಿ ವಸ್ತುಗಳನ್ನು ನಗರ್ತಪೇಟೆಯ ಜ್ಯುವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಕೆಲವು ಆಭರಣಗಳನ್ನು ತಮಿಳುನಾಡಿನ ತನ್ನ ವಾಸದ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಮತ್ತೊಬ್ಬ ಆರೋಪಿ ತಿಳಿಸಿದ್ದಾನೆ.

ಇವರಿಂದ ಪೊಲೀಸರು ಒಟ್ಟು 537.94 ಗ್ರಾಂ ಚಿನ್ನಾಭರಣ, 7 ಕೆಜಿ 840 ಗ್ರಾಂ ಬೆಳ್ಳಿವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ರಾಜರಾಜೇಶ್ವರಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ 6 ಮನೆಕಳವು ಪ್ರಕರಣಗಳು ಹಾಗೂ ವಿಜಯನಗರ ಪೊಲೀಸ್‌‍ ಠಾಣೆಯ ಒಂದು ಕಳವು ಸೇರಿದಂತೆ ಒಟ್ಟು 7 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article