ಬೆಂಗಳೂರು: ಕರ್ನಾಟಕ ಗಡಿ ಮತ್ತು ನದಿಗಳ ವಿವಾದಗಳ ವಿಷಯಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಉಸ್ತುವಾರಿಯನ್ನಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರನ್ನು ನೇಮಿಸಿ ಆದೆಶ ಹೊರಡಿಸಲಾಗಿದೆ.
ಈ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಪರಿಶೀಲಿಸಿ, ಸಮಯೋಚಿತ ಅವಶ್ಯಕ ಕ್ರಮ ತೆಗೆದುಕೊಳ್ಳಲು ಸಚಿವರೊಬ್ಬರಿಗೆ ಜವಾಬ್ದಾರಿ ವಹಿಸಲು ಸರ್ಕಾರ ನಿರ್ಧರಿಸಿತ್ತು. ಹೀಗಾಗಿ, ಪಾಟೀಲ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಇವರ ನೇಮಕವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿದ್ದಾರೆ.
ಕರ್ನಾಟಕದ ಗಡಿ ಭಾಗದಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಕನ್ನಡ ಪರ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಸಮಸ್ಯೆಗಳು ಮತ್ತು ಸವಾಲುಗಳು ತುಂಬಾ ಗಂಭೀರವಾದುದಾಗಿರುತ್ತವೆ. ಕರ್ನಾಟಕ ರಾಜ್ಯದ ಒಳಗಿರುವ ಗಡಿ ಭಾಗದಲ್ಲಿನ ಪ್ರದೇಶಗಳ ಅಭಿವೃದ್ಧಿಯ ಜೊತೆಗೆ ಕರ್ನಾಟಕದ ಹೊರಗಿರುವ ಆರು ನೆರೆ ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಕನ್ನಡ ಪ್ರದೇಶಗಳಲ್ಲಿನ ಕನ್ನಡದ ಕಾಯಕವನ್ನು ಕೈಗೊಳ್ಳುವುದು ತೀರಾ ಅಗತ್ಯವಾಗಿರುತ್ತದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರಕಾರವು 63 ತಾಲ್ಲೂಕುಗಳನ್ನು ಗಡಿ ಭಾಗದ ತಾಲ್ಲೂಕುಗಳೆಂದು ಗುರುತಿಸಿದೆ. ಇವು ಸುಮಾರು 19 ಗಡಿ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ. ಜೊತೆಗೆ ಆರು ನೆರೆ ರಾಜ್ಯಗಳಲ್ಲಿನ ಕರ್ನಾಟಕದ ಗಡಿ ಭಾಗದ ಪ್ರದೇಶದಲ್ಲಿರುವ ಕನ್ನಡಿಗರಿಗೂ ಹಲವಾರು ಸಮಸ್ಯೆಗಳಿವೆ. ಇವರ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಸರ್ಕಾರವು ೨೦೧೦ರಲ್ಲಿ ʼಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರʼ ವನ್ನು ಸ್ಥಾಪಿಸಿ ಅದನ್ನು ಈಗ ಯೋಜನಾ ಆಯೋಗದ ಅಡಿಗೆ ತಂದಿದೆ.
ರಾಜ್ಯದ ಹಾಗೂ ಹೊರರಾಜ್ಯದ ಕನ್ನಡ ಪರ ಸಂಘ/ಸಂಸ್ಥೆಗಳಿಗೆ ಭಾಷಾ ಚಟುವಟಿಕೆಗಳಿಗಾಗಿ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆವರಣ ಗೋಡೆ, ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತಿದೆ.
ಸರಕಾರವು ಇದೀಗ ಗಡಿ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಹಿರಿಯ ಸಚಿವರಾದ ಎಚ್ ಕೆ ಪಾಟೀಲರಿಗೆ ವಹಿಸಿದೆ. ಇದು ಗಡಿ ಭಾಗದ ಕನ್ನಡಿಗರ ಬೇಡಿಕೆಯೂ ಹೌದು. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಕೆಲಸ ಮಾಡಿತ್ತು. ಗಡಿ ಭಾಗದ ಕನ್ನಡಿಗರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ವಿನಂತಿ ಮಾಡಿಕೊಂಡಿದ್ದಾರೆ.