ಬೆಂಗಳೂರು: ನಮ್ಮ “ಕಾಮ್ ಕಿ ಬಾತ್“ನ ಯಶಸ್ಸನ್ನು ಪ್ರಧಾನಿಯವರು “ಮನ್ ಕಿ ಬಾತ್” ನಲ್ಲಿ ಪ್ರಸ್ತಾಪಿಸಿದ್ದಾರೆ. ಕಲಬುರಗಿ ಮಹಿಳೆಯರಲ್ಲಿನ ಕೌಶಲ್ಯಕ್ಕೆ ಉತ್ತಮ ಮಾರುಕಟ್ಟೆ ಒದಗಿಸಿ ಮೌಲ್ಯವರ್ಧನೆಗೆ ಸಹಾಯಕವಾಗಿ ನಿಂತಿದ್ದು ಕಲಬುರಗಿಯ ಜಿಲ್ಲಾಡಳಿತ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ರೊಟ್ಟಿಯ ಯಶಸ್ಸಿನ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. ನಿನ್ನೆಯ ಮನ್ ಕಿ ಬಾತ್ ನಲ್ಲಿ ಮೋದಿ ಅವರು ಕಲಬುರಗಿಯ ರೊಟ್ಟಿಯ ಯಶಸ್ಸಿನ ಕತೆಯನ್ನು ಕುರಿತು ಹಂಚಿಕೊಂಡಿದ್ದರು.
ರೊಟ್ಟಿಗಳಿಗೆ ಆನ್ ಲೈನ್ ಮಾರುಕಟ್ಟೆ ಸೃಷ್ಟಿಸಿ, ಅದಕ್ಕೊಂದು ಬ್ರ್ಯಾಂಡ್ ರೂಪಿಸಿ, ದೊಡ್ಡ ಮಟ್ಟದ ಗ್ರಾಹಕ ವರ್ಗವನ್ನು ಸೃಷ್ಟಿಸಿದ ಪರಿಣಾಮ “ಕಲಬುರಗಿ ರೊಟ್ಟಿ”ಗಳು ಇಂದು ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ಒದಗಿಸಿದೆ. ರೊಟ್ಟಿಗಳ ಘಮ ಪ್ರಧಾನಿಯವರಿಗೂ ತಲುಪಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
– ಬ್ರ್ಯಾಂಡಿಂಗ್ ಗಾಗಿ ರಾಜ್ಯ ಸರ್ಕಾರ ಸೀಡ್ ಫಂಡ್ ಒದಗಿಸಿದೆ
– ಸ್ವಸಹಾಯ ಸಂಘಗಳು ಹಾಗೂ ಇತರ ಉತ್ಸಾಹಿ ಮಹಿಳೆಯರಿಗೆ ಸಬ್ಸಿಡಿಯಲ್ಲಿ ಸುಮಾರು 150 ರೊಟ್ಟಿ ಯಂತ್ರಗಳನ್ನು ಒದಗಿಸಲಾಗಿದೆ
– CSR ನಿಧಿಯ ಮೂಲಕ ರೂ.6.5 ಲಕ್ಷ ಒದಗಿಸಲಾಗಿದೆ
– ಪ್ಯಾಕಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ನಲ್ಲಿ ನೆರವು ನೀಡಲಾಗುತ್ತಿದೆ
– ಹೊರ ರಾಜ್ಯಗಳಲ್ಲೂ ಮಾರುಕಟ್ಟೆ ವಿಸ್ತರಿಸಲಾಗುತ್ತಿದೆ
– ವಿದೇಶಗಳಿಗೆ ರಫ್ತ್ತು ಮಾಡುವ ಸಾಧ್ಯತೆಗಳ ಬಗ್ಗೆ ಪ್ರಯತ್ನ ಮಾಡಲಾಗುತ್ತಿದೆ
– ಸ್ವಿಗ್ಗಿ, ಜೋಮೊಟೊ, ಆಮೇಜಾನ್ ಸೇರಿದಂತೆ ಹಲವು ಪ್ರಸಿದ್ಧ ವೇದಿಕೆಗಳಲ್ಲೂ ಮಾರುಕಟ್ಟೆ ಸೃಷ್ಟಿಸಿಲಾಗಿದೆ
ಇದು ಕಾಂಗ್ರೆಸ್ ಸರ್ಕಾರದ “ಕಾಮ್ ಕಿ ಬಾತ್”!
“ರಿಪಬ್ಲಿಕ್ ಆಫ್ ಕಲಬುರಗಿ“ ಎನ್ನುತ್ತಿದ್ದ @BJP4Karnataka ನಾಯಕರಿಗೆ ಸ್ವತಃ ಪ್ರಧಾನಿಗಳೇ ”ಸಕ್ಸಸ್ ಸ್ಟೋರಿಸ್ ಆಫ್ ಕಲಬುರಗಿ” ಎಂಬ ಉತ್ತರ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.