ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಹಿರಿಯ ವಕೀಲರಾದ ಎಸ್. ಸುಶೀಲಾ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿದೆ.
ಹೈಕೋರ್ಟ್ ನ ವಿಭಾಗೀಯ ಪೀಠ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ಈ ಪ್ರಕರಣದ ಎಲ್ಲ ದಾಖಲೆಗಳನ್ನು ಎಸ್.ಸುಶೀಲಾರಿಗೆ ನೀಡಲು ಪೀಠ ಸೂಚನೆ ನೀಡಿತು. ಈ ಸಂದರ್ಭದಲ್ಲಿ ಕೆಎಸ್ ಸಿಎ, ಆರ್ ಸಿಬಿ, ಡಿಎನ್‌ಎ ಪರ ವಕೀಲರು ಹಾಜರಾಗಿದ್ದರು.
ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಿದೆ. ಈ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಿಚಾರಣೆಯನ್ನು ಅಮಿಕಸ್ ಕ್ಯೂರಿ ನೇಮಕದ ಬಳಿಕ ವಿಚಾರಣೆ ನಡೆಸಲಾಗುವುದು ಎಂದು ನ್ಯಾ.ವಿ.ಕಾಮೇಶ್ವರ ರಾವ್, ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಈ ಮಧ್ಯೆ ಪರಿಹಾರದ ಹಣ ಹೆಚ್ಚಿಸುವಂತೆ ಸಂತ್ರಸ್ತರೂ ಕೂಡ ಅರ್ಜಿ ಸಲ್ಲಿಕೆ ಮಾಡಿದರು. ಸರ್ಕಾರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರಿಹಾರ ನೀಡುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಮೃತಪಟ್ಟವರಿಗೆ 25 ಲಕ್ಷ ರೂ. ನೀಡಿದೆ. ಆದರೆ ಸಿಡಿಲು ಬಡಿದು ಮೃತಪಟ್ಟವರಿಗೆ ಈ ಮೊತ್ತದ ಪರಿಹಾರ ನೀಡಿಲ್ಲ. ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರಿಗೂ ಪರಿಹಾರ ನೀಡಿಲ್ಲ. ಆದ್ದರಿಂದ ಎಲ್ಲ ಪ್ರಕರಣಗಳಲ್ಲೂ ಏಕರೂಪದ ಪರಿಹಾರ ನೀಡಲು ಅರ್ಜಿ ಮೂಲಕ ಮನವಿ ಮಾಡಲಾಗಿದೆ. ಈ ಹಂತದಲ್ಲಿ ಯಾವುದೇ ಅಭಿಪ್ರಾಯ ಹೇಳುವುದಿಲ್ಲ ಎಂದ ಹೈಕೋರ್ಟ್ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜುಲೈ 1 ಕ್ಕೆ ಮುಂದೂಡಿತು.