ಬೆಂಗಳೂರು: ಕೋಲಾರದ ಬಳಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿದ್ದೇನೆ ಎಂಬ ಆರೋಪಕ್ಕೆ ಹಿರಿಯ ಕೆಎಎಸ್ ಅಧಿಕಾರಿ, ವಸತಿ ಸಚಿವ ಜಮೀರ್ ಆಹಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫ್ ರಾಜ್ ಖಾನ್ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಈ ಸಂಬಂಧ ಅವರು ವಿಡಿಯೋ ಮೂಲಕ ಸ್ಪಷ್ಟೀಕರಣ ನೀಡಿದ್ದು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ಕೋಲಾರದ ಸಮೀಪ ಇರುವ ತಾರಕ ಜಲಾಶಯದ ಬಳಿಯ ಜಮೀನನ್ನು ನಾನು 2006ರಲ್ಲಿಯೇ ಖರೀದಿಸಿ ವಾಸಕ್ಕೆ ಮನೆ ನಿರ್ಮಿಸಿದ್ದೇನೆ. ಹಲವಾರು ವರ್ಷ ಈ ಮನೆಯಲ್ಲಿ ವಾಸಿಸಿದ್ದು, ನನ್ನ ಮಕ್ಕಳು ಈ ಮನೆಯಲ್ಲಿ ಆಡಿ ಬೆಳೆದಿದ್ದಾರೆ ಎಂದಿದ್ದಾರೆ.
ನಾನು ಕೆಲವೇ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದು, ಇಲ್ಲಿಯೇ ವಾಸಿಸಲು ನಿರ್ಧರಿಸಿದ್ದೇನೆ. ಜತೆಗೆ ನನ್ನ ಜೀವನೋಪಾಯಕ್ಕೆ ಹೋಮ್ ಸ್ಟೇ ಮಾಡಲು ತೀರ್ಮಾನಿಸಿದ್ದೇನೆ. ಇದು ರೆಸಾರ್ಟ್ ಅಲ್ಲ. ರೆಸಾರ್ಟ್ ಗೂ ಹೋಮ್ ಸ್ಟೇಗೂ ಬಹಳ ವ್ಯತ್ಯಾಸ ಇದೆ ಎಂದಿದ್ದಾರೆ.
ಹೋಮ್ ಸ್ಟೇ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿದ್ದೇನೆ. ಅರಣ್ಯ ಇಲಾಖೆ ಈ ಭೂಮಿ ಆನೆ ಕಾರಿಡಾರ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿರುವ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಕನ್ನಡ ಹೋರಾಟಗಾರ ಎಂದು ಹೇಳಿಕೊಳ್ಳುವ ರೂಪೇಶ್ ರಾಜಣ್ಣ ಎಂಬಾತ ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಕನ್ನಡ ಹೋರಾಟದ ಹೆಸರಿನಲ್ಲಿ ಹಣ ನೀಡುವಂತೆ ಒತ್ತಡ ಹೇರುತ್ತಿದ್ದಾನೆ. ನನ್ನ ಮನೆ ಇರುವ ಗ್ರಾಮಕ್ಕೆ ಬಂದು ಸ್ಥಳೀಯರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾನೆ. ಹತ್ತಾರು ಬಾರಿ ತಹಶೀಲ್ದಾರ್, ಎಸಿ, ಮತ್ತು ಪೊಲೀಸರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ನನ್ನ ಕಚೇರಿಗೂ ಬಂದು ಹಣಕ್ಕಾಗಿ ಆಗ್ರಹಪಡಿಸುತ್ತಿದ್ದಾನೆ.
ಕನ್ನಡ ಹೋರಾಟ ಕುರಿತು ನಾನೂ ನನ್ನ ಅಧಿಕಾರಾವಧಿಯಲ್ಲಿ ಕೆಲಸ ಮಾಡಿದ್ದೇನೆ. ಕೆಜಿಎಫ್ ನಲ್ಲಿ ಕೆಲಸ ಮಾಡುವಾಗ ಕನ್ನಡ ಪರ ಸಾಕಷ್ಟು ಕೆಲಸ ಮಾಡಿದ್ದೇನೆ. ಈತನಿಂದ ಕನ್ನಡ ಕೆಲಸ ಏನೆಂದು ನಾನು ಕಲಿಯಬೇಕಿಲ್ಲ ಎಂದೂ ತಿರುಗೇಟು ನೀಡಿದ್ದಾರೆ.
ನನ್ನ 25-30 ವರ್ಷಗಳ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿದ್ದೇನೆ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿದ್ದೇನೆ. ಕೋವಿಡ್ ಸಮಯದಲ್ಲಿ ಬಿಬಿಎಂಪಿಯಲ್ಲಿ ಜಂಟಿ ಆಯುಕ್ತಾಗಿ ಕೆಲಸ ಮಾಡಿದ್ದೇನೆ ಎಂದು ಸರ್ಫ್ ರಾಜ್ ಹೇಳಿದ್ದಾರೆ.
ಕನ್ನಡದ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿರುವ ರೂಪೇಶ್ ರಾಜಣ್ಣ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.