ಬೆಂಗಳೂರು: ಸರ್ಕಾರಿ ಯೋಜನೆಗಳ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ ಬಳಿಕ ಈಗ ವಸತಿ ಯೋಜನೆಯಲ್ಲೂ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ವಸತಿ ಯೋಜನೆಯಲ್ಲಿ ಅಲ್ಪ ಸಂಖ್ಯಾತರಿಗೆ ಮೀಸಲಾತಿ ಹೆಚ್ಚಳಕ್ಕೆ ಮಹತ್ವದ ತೀರ್ಮಾನ ಮಾಡಿದೆ.
ವಸತಿ ಯೋಜನೆಯಡಿ ಮುಸ್ಲಿಂ ಸೇರಿದಂತೆ ಇತರೆ ಅಲ್ಪ ಸಂಖ್ಯಾತ ಸಮುದಾಯಗಳಿಗೆ ಇದ್ದ ಮೀಸಲಾತಿಯನ್ನು ಶೇ.10 ರಿಂದ ಶೇ.15ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೀಸಲಾತಿಯನ್ನು ಪ್ರಸ್ತುತ ಶೇ.10 ರಿಂದ ಶೇ.15 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದರು. ಇದೀಗ ಈ ಪ್ರಸ್ತಾವನೆಗೆ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನಿಯಮ ರಾಜ್ಯಾದ್ಯಂತ ವಸತಿ , ನಗರ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಾರಿಗೊಳಿಸುವ ಎಲ್ಲಾ ವಸತಿ ಯೋಜನೆಗಳಿಗೆ ಅನ್ವಯಿಸುತ್ತದೆ.
ಸಚಿವ ಸಂಪುಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಾನೂನು ಸಚಿವ ಹೆಚ್ ಕೆ ಪಾಟೀಲ್, ವಸತಿ ಇಲಾಖೆ ಅನುಷ್ಠಾನಗೊಳಿಸುವ ವಿವಿಧ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದ್ದು, ಶೇಕಡಾ 10ರಿಂದ ಶೇ.15ಕ್ಕೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಮುಸ್ಲಿಮರ ಅಭಿವೃದ್ಧಿ ಕುರಿತು ಸಾಚಾರ್ ಕಮಿಟಿ ವರದಿಯನ್ನು ಕೇಂದ್ರ ಸರ್ಕಾರವೂ ಪರಿಗಣಿಸುತ್ತಿದೆ. ಕೇಂದ್ರದ ಸೂಚನೆಗಳ ಅನ್ವಯದಂತೆ ಸಾಮಾಜಿಕ ನ್ಯಾಯದ ಪಾಲನೆ ಮಾಡುತ್ತಿದ್ದೇವೆ. ಮುಸ್ಲಿಮರಷ್ಟೇ ಅಲ್ಲದೆ ಜೈನರು, ಕ್ರಿಶ್ಚಿಯನ್ ಎಲ್ಲರಿಗೂ ಈ ಯೋಜನೆಯ ಪ್ರಯೋಜನ ಸಿಗಲಿದೆ. ಇದಕ್ಕೆ ಬೇಕಾದ ಹಲವು ಅಧ್ಯಯನ ವರದಿಗಳೂ ಕೂಡ ಇವೆ. ಬಡವರಿಗೆ ಮನೆ ಮಾಡಿಕೊಡುವುದರಲ್ಲಿ ರಾಜಕೀಯ ವಾಸನೆ ಹುಡುಕುವವರಿಗೆ ನಾವು ಉತ್ತರ ಕೊಡಬೇಕಾಗಿಲ್ಲ. ವಸತಿ ಹೀನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಬೇಕು ಎನ್ನುವುದಷ್ಟೇ ಸರ್ಕಾರದ ಉದ್ದೇಶ ಎಂದು ಹೇಳಿದರು.
ಈ ಮೀಸಲಾತಿ ಹೆಚ್ಚಳ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಗರ ಪ್ರದೇಶದಲ್ಲಿ ಬಹಳಷ್ಟು ಜನರು ಅಲ್ಪಸಂಖ್ಯಾತರಿದ್ದಾರೆ. ಅನೇಕ ಕಡೆ ಸರ್ಕಾರವೇ ಕಟ್ಟಿರುವ ಮನೆಗಳು ಖಾಲಿ ಇವೆ. ಅಲ್ಪಸಂಖ್ಯಾತರ ಜನಸಂಖ್ಯೆಯೂ ಹೆಚ್ಚುತ್ತಿದೆ. ಅವರಿಗೂ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಶೇ. 15 ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ನಾವು ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ ಎಂದು ಸಮರ್ಥಿಸಿಕೊಂಡರು.