ಸುಗಮ ಪ್ರಯಾಣಕ್ಕಾಗಿ ಆಗಸ್ಟ್‌ 15ರಿಂದ ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್‌ ಜಾರಿ: ಸಚಿವ ನಿತಿನ್‌ ಗಡ್ಕರಿ

Most read

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಆಗಸ್ಟ್‌ 15ರಿಂದ ಫಾಸ್ಟ್‌ ಟ್ಯಾಗ್‌ ಆಧಾರಿತ ವಾರ್ಷಿಕ ಪಾಸ್‌ ಜಾರಿಗೊಳಿಸಲಿದೆ ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಹೊಸ ಪದ್ದತಿಯಲ್ಲಿ ಫಾಸ್ಟ್‌ ಟ್ಯಾಗ್ ಕಾರ್ಡ್‌ ಗಳನ್ನು ಪದೇ ಪದೇ ರೀಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ. ಹೆದ್ದಾರಿ ಶುಲ್ಕ ವಸೂಲಿ ಕೇಂದ್ರಗಳಲ್ಲಿ ನಗದು ಬಳಸಿ ಶುಲ್ಕ ಪಾವತಿಸುವ ಅಗತ್ಯವೂ ಇರುವುದಿಲ್ಲ. ಈ ಪದ್ದತಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣಕ್ಕೆ ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆ ಎಂದು ಗಡ್ಕರಿ ಅವರು ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ಫಾಸ್ಟ್‌ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್‌ಟ್ಯಾಗ್ ಖರೀದಿಸುವ ಅಗತ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ವಾರ್ಷಿಕ ಪಾಸ್ ಅನ್ನು ನಿಮ್ಮಲ್ಲಿರುವ ಫಾಸ್ಟ್‌ ಟ್ಯಾಗ್‌ ನಲ್ಲಿ ಸಕ್ರಿಯಗೊಳಿಸಬಹುದು. ಆದರೆ, ಫಾಸ್ಟ್‌ ಟ್ಯಾಗ್‌ ಎಲ್ಲ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು. ಅಂದರೆ, ಅದನ್ನು ವಾಹನದ ವಿಂಡ್‌ ಶೀಲ್ಡ್‌ನಲ್ಲಿ ಸರಿಯಾಗಿ ಅಂಟಿಸಿರಬೇಕು, ವಾಹನ ನೋಂದಣಿ ಸಂಖ್ಯೆಗೆ ಲಿಂಕ್ ಮಾಡಿರಬೇಕು, ಕಪ್ಪುಪಟ್ಟಿಗೆ ಸೇರಿರಬಾರದು ಎಂದು ಸಚಿವಾಲಯ ತಿಳಿಸಿದೆ.

ಹೊಸ ಕ್ರಮವು 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲೀನ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಸುಲಭ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.

ರಸ್ತೆ ಸಾರಿಗೆ ಸಚಿವಾಲಯದ 2024ರ ವರ್ಷಾಂತ್ಯದ ಮಾಹಿತಿ ಪ್ರಕಾರ, 2024 ಡಿಸೆಂಬರ್ 1ರವರೆಗೆ 10.1 ಕೋಟಿಗೂ ಹೆಚ್ಚು ವಾಹನಗಳು ಫಾಸ್ಟ್‌ ಟ್ಯಾಗ್‌ ಗಳನ್ನು ವಿತರಿಸಲಾಗಿದೆ. ಈಗ ನಿರ್ದಿಷ್ಟ ಟೋಲ್ ಪ್ಲಾಜಾ ಮೂಲಕ ಆಗಾಗ ಹಾದುಹೋಗುವ ವಾಹನಗಳಿಗೆ ಮಾಸಿಕ ಪಾಸ್‌ಗಳು ಲಭ್ಯವಿವೆ. ತಿಂಗಳಿಗೆ ರೂ. 340 ಮತ್ತು ವಾರ್ಷಿಕವಾಗಿ ರೂ.4,080 ಪಾವತಿಸಿ ಈ ಪಾಸ್‌ ಪಡೆಯಬಹುದು. ರಾಷ್ಟ್ರೀಯ ಹೆದ್ದಾರಿ ಶುಲ್ಕ ಪ್ಲಾಜಾದಲ್ಲಿ ಫಾಸ್ಟ್‌ ಟ್ಯಾಗ್ ಮೂಲಕ ಪ್ರತಿದಿನ ರೂ.. 200 ಕೋಟಿ ಟೋಲ್‌ ಮೊತ್ತ ಸಂಗ್ರಹವಾಗುತ್ತಿದೆ.

More articles

Latest article