ಆರ್‌ ಸಿ ಬಿ ಸಂಭ್ರಮಾಚರಣೆ; ಓರ್ವ ಟೆಕ್ಕಿ ಸೇರಿ 10 ಮಂದಿ ಸಾವು; 20 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

Most read

ಬೆಂಗಳೂರು: ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ತಂಡದ ಸಂಭ್ರಮಾಚರಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಬೌರಿಂಗ್‌ ಹಾಗೂ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಅಪಾರ ಪ್ರಮಾಣದಲ್ಲಿ ಆರ್‌ ಸಿಬಿ ಅಭಿಮಾನಿಗಳು ಜಮಾಯಿಸಿದ್ದರು. ಇವರನ್ನು  ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೂ ಅವರನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಮಧ್ಯಾಹ್ನ 12 ಗಂಟೆಯಿಂದಲೇ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಆರ್‌ ಸಿ ಬಿ ಅಭಿಮಾನಿಗಳು ದಂಡು ದಂಡಾಗಿ ಆಗಮಿಸುತ್ತಿದ್ದರು. ಪೋಷಕರು ತಮ್ಮ ಪುಟ್ಟಮಕ್ಕಳನ್ನೂ  ಕ್ರೀಡಾಂಗಣಕ್ಕೆ ಕರೆ ತಂದಿದ್ದರು.

ಏಕಾಏಕಿ ವಿಜಯೋತ್ಸವವನ್ನು ಹಮ್ಮಿಕೊಂಡಿದ್ದರಿಂದ ಭದ್ರತೆಯನ್ನು ಕೈಗೊಳ್ಳಲು ಪೊಲೀಸರಿಗೆ ಸಮಯಾವಕಾಶ ಸಾಕಾಗಿಲ್ಲ ಎಂದು ಗೋಚರಿಸುತ್ತದೆ.  ದೊಡ್ಡಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಪೊಲೀಸರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದ 6 ಮಂದಿ ಹಾಗೂ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದ 4 ಮಂದಿ ಅಸು ನೀಗಿರುವುದು ಖಚಿತವಾಗಿದೆ. ಕಾಲ್ತುಳಿತಕ್ಕೆ ಸಿಕ್ಕಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಮೃತಪಟ್ಟವರ ಪೈಕಿ ಉಸಿರಾಟದ ಸಮಸ್ಯೆಯಿಂದ ಐಟಿ ಉದ್ಯೋಗಿ ಸಹನಾ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 12 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯೇಹಿ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ.

More articles

Latest article