ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಬಾಲಕಿಯ ಮೇಲೆ ಸ್ವಾಮೀಜಿ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳಾ ಠಾಣೆ ಪೊಲೀಸರು ಮೂಡಲಗಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು. ಸ್ವಾಮೀಜಿ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.
ಮೇ 13ರಂದು ಮನೆಗೆ ತಲುಪಿಸುವುದಾಗಿ ಬಾಲಕಿಯನ್ನು ಸ್ವಾಮೀಜಿ ರಾಯಚೂರಿಗೆ ಕರೆದೊಯ್ದಿದ್ದಾರೆ. ಮೇ 14 ರವರೆಗೆ ರಾಯಚೂರಿನಲ್ಲಿ ಇದ್ದು, ಬಳಿಕ ಮೇ 15ರಂದು ರಾತ್ರಿ ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಎರಡೂ ಕಡೆ ಉಳಿದುಕೊಂಡಿದ್ದಾಗ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಮೇ 16ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ಸ್ವಾಮಿ ಹೊರಟು ಹೋಗಿದ್ದಾರೆ. ಮೇ 17ರಂದು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬಳಿಕ ಮಹಿಳಾ ಠಾಣೆ ಪೊಲೀಸರು ಮೂಡಲಗಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ.
ಆರೋಗ್ಯ ಸರಿ ಇಲ್ಲದಿದ್ದಾಗ ಆಕೆಯ ಪೋಷಕರೇ ಬಾಲಕಿಯನ್ನು ವಾರಗಟ್ಟಲೇ ಮಠದಲ್ಲೇ ಮಠದಲ್ಲಿ ಬಿಟ್ಟು ಹೋಗುತ್ತಿದ್ದರು. ಈ ಅವಕಾಶವನ್ನು ಸ್ವಾಮೀಜಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಮಠದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತಿದ್ದ ಆರೋಪ ಹಿಂದೆ ಕೇಳಿ ಬಂದಿತ್ತು. 2021ರಲ್ಲಿ ಗ್ರಾಮಸ್ಥರು ಸ್ವಾಮೀಜಿಗೆ ಹೊಡೆದು ಬುದ್ಧಿವಾದ ಹೇಳಿದ್ದರು. ಆದರೂ ಬುದ್ದಿ ಬಿಡದ ಸ್ವಾಮೀಜಿ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. ಬುದ್ದಿ ಕಲಿಯದ ಸ್ವಾಮೀಜಿಗೆ ಶಿಕ್ಷೆ ವಿಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.