ಮೈಸೂರು ಸ್ಯಾಂಡಲ್‌ ಸೋಪ್‌ ಗೆ ತಮನ್ನಾ ಭಾಟಿಯಾ  ರಾಯಭಾರಿ: ಸಚಿವ ಎಂ.ಬಿ.ಪಾಟೀಲ ಸಮರ್ಥನೆ

Most read

ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ ಗೆ ಪ್ರಚಾರ ರಾಯಭಾರಿಯಾಗಿ ಬಾಲಿವುಡ್‌ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸಮರ್ಥಿಸಿಕೊಂಡಿದ್ದಾರೆ. ತಮನ್ನಾ ಅವರನ್ನೇ ಏಕೆ ಆಯ್ಕೆ ಮಾಡಲಾಯಿತು ಎನ್ನುವುದಕ್ಕೆ ಅವರು ಕಾರಣಗಳನ್ನೂ ನೀಡಿದ್ದಾರೆ.

ಪರಭಾಷಾ ನಟಿ ತಮನ್ನಾ ಅವರಿಗೆ ರೂ.6.20 ಕೋಟಿ ಬೃಹತ್‌ ಮೊತ್ತವನ್ನು ನೀಡಿ ರಾಯಭಾರಿಯನ್ನಾಗಿ ಆಯ್ಕೆ  ಮಾಡಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು.

ಈ ಸಂಬಂಧ ಸಚಿವರು ಎಕ್ಸ್‌ ನಲ್ಲಿ ಸ್ಪಷ್ಟನೆ ನೀಡಿದ್ದು, ‘ಕರ್ನಾಟಕದೊಳಗೆ ಈಗಾಗಲೇ ಮೈಸೂರು ಸ್ಯಾಂಡಲ್ ಸೋಪ್ ಬಹಳ ಪ್ರಸಿದ್ಧಿಯಾಗಿದೆ. ಹೊರ ರಾಜ್ಯಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸುವುದಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕನ್ನಡ ಚಿತ್ರೋದ್ಯಮದ ಬಗ್ಗೆ KSDL ಅಪಾರವಾದ ಗೌರವ ಹೊಂದಿದೆ. ಈಗಾಗಲೇ ಕನ್ನಡದ ಹಲವು ಚಿತ್ರಗಳು ಬಾಲಿವುಡ್‌ಗೆ ಸ್ಪರ್ಧೆ ಒಡ್ಡಿರುವುದು ನಮಗೆ ತಿಳಿದಿದೆ ಎಂದಿದ್ದಾರೆ.

ಆದರೂ ಕರ್ನಾಟಕದಾಚೆಗೂ ಕೆಎಸ್‌ ಡಿಎಲ್‌ ಉತ್ಪನ್ನ ಬೆಳೆಯಬೇಕಾಗಿರುವುದರಿಂದ ಹಾಗೂ 2028 ರೊಳಗೆ KSDLನ ವಾರ್ಷಿಕ ಆದಾಯ 5 ಸಾವಿರ ಕೋಟಿ ರೂ. ಮೀರುವ ಗುರಿ ಇರುವುದರಿಂದ ನಮ್ಮ ತೀರ್ಮಾನ ಸರಿಯಾಗಿದೆ ಎಂದು ಭಾವಿಸುತ್ತೇವೆ.  ಇದೊಂದು ಸಾರ್ವಜನಿಕ ವಲಯ ಉದ್ಯಮದ ಸ್ವತಂತ್ರ ನಿರ್ಧಾರವಾಗಿದ್ದು ಹಲವಾರು ಮಾರುಕಟ್ಟೆ ತಜ್ಞರ ಜತೆ ಸಮಾಲೋಚನೆ ನಡೆಸಿಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದದು ಸಮರ್ಥಿಸಿಕೊಂಡಿದ್ದಾರೆ.

ಹೊರ ರಾಜ್ಯಗಳಲ್ಲೂ ಮಾರುಕಟ್ಟೆ ವಿಸ್ತರಣೆಗೆ ಪ್ರಚಾರ ರಾಯಭಾರಿಯನ್ನು ನೇಮಿಸಲು ಕೆಲವು ಮಾನದಂಡಗಳನ್ನು ನಮ್ಮ ಮಾರುಕಟ್ಟೆ ಪರಿಣಿತರು ಗುರುತಿಸಿದ್ದಾರೆ. ಆಯ್ಕೆ ಮಾಡಿದ ಪ್ರಚಾರ ರಾಯಭಾರಿ ನಿಗದಿತ ಸಮಯದಲ್ಲಿ ಬೇರೆ ಉತ್ಪನ್ನದ ಜೊತೆ ಗುರುತಿಸಿಕೊಳ್ಳದೇ ಇರುವುದು, ಟಾರ್ಗೆಟ್ ಆಡಿಯನ್ಸ್ ಹೆಚ್ಚು ಇಷ್ಟಪಡುವ ನಟಿಯನ್ನು ಆಯ್ಕೆ ಮಾಡುವುದು, ಅವರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಫಾಲೋವರ್‌ ಗಳನ್ನು ಹೊಂದಿರುವಂತವರನ್ನು ಹಾಗೂ ವ್ಯಾ‍ಪಕವಾದ ಮಾರುಕಟ್ಟೆ ಉತ್ಪನ್ನಕ್ಕೆ ಸೂಕ್ತ ಆಗುವವರನ್ನು ಗುರುತಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲರು ಹೇಳಿದ್ದಾರೆ.

More articles

Latest article