ಬೆಂಗಳೂರು: ʼಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕಿರುತೆರೆ ನಟಿಯೊಬ್ಬರು ಇವರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಬಂಧನದ ಭೀತಿ ಎದುರಿಸುತ್ತಿರುವ ಮನು ಪರಾರಿಯಾಗಿದ್ದಾರೆ. ಅವರ ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, ಇಡೀ ಚಿತ್ರತಂಡ ಮುಜುಗರಕ್ಕೀಡಾಗಿದೆ.
ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಎಲ್ಲರನ್ನೂ ನಕ್ಕುನಗಿಸುತ್ತಿದ್ದ ಮಡೆನೂರು ಮನು ಖ್ಯಾತಿ ಪಡೆದಿದ್ದರು. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ನಾಯಕ ನಟನಾಗಿ ನಟಿಸುವ ಅವಕಾಶ ಪಡೆದಿದ್ದರು. ಈ ಚಿತ್ರ ನಾಳೆ ಮೇ 23ರಂದು ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲೇ ನಾಯಕನಟನ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಚಿತ್ರತಂಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಸಿನಿಮಾದಲ್ಲಿ ನಟಿಸುವಾಗ ಮಡೆನೂರು ಮನುಗೆ ಕಿರುತೆರೆ ನಟಿ ಪರಿಚಯ ಆಗಿದೆ. ನಂತರ ಇಬ್ಬರಿಗೂ ಗೆಳೆತನ ಬೆಳೆದಿದೆ. ಇದೀಗ ಮನು ನನ್ನ ಮೇಲೆ ಮನು ಅತ್ಯಾಚಾರ ಎಸಗಿದ್ದಾನೆ ಎಂದು ಕಿರುತೆರೆ ನಟಿ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮನುವಿಗಾಗಿ ಹುಡುಕಾಟ ನಡೆಸಿದ್ದಾರೆ.