ಹಾಸನ: ಕಲ್ಯಾಣ ಮಂಟಪದಲ್ಲಿ ತಾಳಿ ಕಟ್ಟಿಸಿಕೊಂಡ ಕೂಡಲೇ ನವವಧು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಬಿಕಾಂ ಪರೀಕ್ಷೆ ಬರೆದ ಘಟನೆ ಹಾಸನ ನಗರದಲ್ಲಿ ನಡೆದಿದೆ. ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಕವನ ಪರೀಕ್ಷೆ ಬರೆದ ವಧು.
ಕವನ ನಗರದ ಚನ್ನಪಟ್ಟಣ ಬಡಾವಣೆಯ ಕುಮಾರ್ ಅನಸೂಯ ದಂಪತಿಯ ಪುತ್ರಿ. ಬಿಕಾಂ ಓದುತ್ತಿರುವಾಗಲೇ ಮದುವೆ ನಿಶ್ಚಯವಾಗಿತ್ತು. ಹಾಸನದ ಪ್ರೈಡ್ ಪದವಿ ಕಾಲೇಜಿನಲ್ಲಿ ಓದುತ್ತಿರುವ ಕವನ ಅವರ ಆಸೆ ಈಡೇರಿದೆ. ಅಂತಿಮ ವರ್ಷದ ಕೊನೆಯ ವಿಷಯದ ಪರೀಕ್ಷೆ ಬರೆದಿದ್ದಾರೆ.
ದಿನೇಶ್ ಎಂಬುವರ ಜತೆ ವಿವಾಹ ನೆರವೇರಿದ್ದು, ಇಂದು ಬೆಳಗ್ಗೆ 9 ಗಂಟೆಗೆ ಮಾಂಗಲ್ಯ ಧಾರಣೆಯಾಗಿದೆ. ಕೂಡಲೇ ಕವನ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಪರಿಖ್ಷೆಗೆ ಹಾಜರಾಗಿದ್ದಾರೆ.
ಪರೀಕ್ಷೆ ಬರೆಯಲೇಬೇಕೆಂಬ ವದುವಿನ ಆಸೆಗೆ ಪೋಷಕರು ಸಹಕಾರ ನೀಡಿದ್ದಾರೆ. ತಾಳಿ ಕಟ್ಟುತ್ತಿದ್ದಂತೆ ಕವನ ಅವರ ಸಹೋದರ ಕಾರ್ತಿಕ್ ಪರೀಕ್ಷಾ ಕೇಂದ್ರಕ್ಕೆ ಕರೆ ತಂದಿದ್ದಾರೆ. ಪರೀಕ್ಷೆ ಬರೆದ ಬಳಿಕ ಯುವತಿ ಕಲ್ಯಾಣಮಂಟಪಕ್ಕೆ ಮರಳಿ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ.