ಬದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಟಪ್ಪಾ ಜಾಮ್ಮಿ ಎಂಬ ಗ್ರಾಮದಲ್ಲಿ ಬಿರುಗಾಳಿ ಬೀಸುತ್ತಿದ್ದ ಸಮಯದಲ್ಲಿ ಟ್ರಾನ್ಸ್ ಫಾರ್ಮ ರ್ ನಿಂದ ಹೊರಹೊಮ್ಮಿದ ಕಿಡಿಯಿಂದ ಉಂಟಾದ ಭಾರಿ ಬೆಂಕಿ ಅವಘಡದಲ್ಲಿ ಸುಮಾರು 200 ಮನೆಗಳು ಸುಟ್ಟು ಭಸ್ಮವಾಗಿವೆ.
ಬುಧವಾರ ರಾತ್ರಿ ಈ ಅವಘಡ ಸಂಭವಿಸಿದ್ದು, ಅನೇಕ ಜಾನುವಾರುಗಳು ಸಾವಿಗೀಡಾಗಿವೆ. ಒಬ್ಬ ವ್ಯಕ್ತಿ ಬೆಂಕಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಓಡಿಹೋಗುತ್ತಿದ್ದಾಗ ಗಂಭೀರ ಸುಟ್ಟ ಗಾಯಕ್ಕೊಳಗಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿಯನ್ನು ನಂದಿಸಲು ಆಗಮಿಸುವ ಹೊತ್ತಿಗೆ ಗ್ರಾಮದಲ್ಲಿ ಸುಮಾರು 200 ಮನೆಗಳು ಸುಟ್ಟು ಭಸ್ಮವಾಗಿದ್ದವು. ಬುಧವಾರ ರಾತ್ರಿ ಬೀಸಿದ ಬಿರುಗಾಳಿಯಿಂದಾಗಿ ಬೆಂಕಿ ಕ್ಷಣ ಮಾತ್ರದಲ್ಲಿ ವ್ಯಾಪಿಸಿದೆ. ಘಟನೆಯಲ್ಲಿ ಯಾರೂ ಸಾವಿಗೀಡಾಗಿಲ್ಲ. ಒಬ್ಬ ವ್ಯಕ್ತಿ ಮಾತ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಕುಮಾರ್ ತಿಳಿಸಿದ್ದಾರೆ. ಮನೆ ಮತ್ತು ಜಾನುವಾರುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರವನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.