ವಿಶಾಖಪಟ್ಟಣಂ: ಪಾರ್ಕ್ ಮಾಡಿದ್ದ ಕಾರಿನೊಳಗೆ ಸಿಲುಕಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಜಯನಗರಂ ಗ್ರಾಮೀಣ ಮಂಡಲದ ದ್ವಾರಪುಡಿ ಗ್ರಾಮದಲ್ಲಿ ನಡೆದಿದೆ. ಮೃತ ಮಕ್ಕಳನ್ನು ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6) ಮತ್ತು ಕಂಡಿ ಮನಸ್ವಿನಿ (6) ಎಂದು ಗುರುತಿಸಲಾಗಿದೆ, ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರಾಗಿದ್ದು, ನಾಲ್ವರು ಮಕ್ಕಳು ಒಂದೇ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
ಆಡಲು ತೆರಳಿದ್ದ ಮಕ್ಕಳು ಮನೆಗೆ ಹಿಂತಿರುಗದ ಕಾರಣ ಪೋಷಕರು ಇಡೀ ಊರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಹುಡುಕಿದ್ದಾರೆ. ಆದರೆ ಪತ್ತೆಯಾಗಿಲ್ಲ. ಊರಿಗೆ ಆಗಮಿಸಿದ್ದ ಕಾರನ್ನು ಪರಿಶೀಲಿಸಿದಾಗ ಅದರೊಳಗೆ ಮಕ್ಕಳು ಇದ್ದದ್ದು ಪತ್ತೆಯಾಗಿದೆ. ಕೂಡಲೇ ಕಾರಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರ ತರಲಾಗಿದೆ. ವಿಜಯನಗರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ತಪಾಸಣೆ ನಡೆಸಿದ ವೈದ್ಯರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ದ್ವಾರಪುಡಿ ಗ್ರಾಮದ ಮಹಿಳಾ ಮಂಡಳಿ ಕಚೇರಿಯ ಬಳಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಕಾರನ್ನು ನಿಲ್ಲಿಸಿದ್ದ. ಆದರೆ ಆತ ಕಾರ್ ಲಾಕ್ ಮಾಡುವುದನ್ನು ಮರೆತಿದ್ದ. ಆಟವಾಡುತ್ತಿದ್ದ ನಾಲ್ವರು ಮಕ್ಕಳು ಕಾರಿನೊಳಗೆ ಹೋಗಿದ್ದು, ಕಾರಿನ ಬಾಗಿಲು ಲಾಕ್ ಆಗಿದೆ. ಉಸಿರಾಡಲು ಸಾಧ್ಯವಾಗದೆ ಮಕ್ಕಳು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಕಾರಿನ ಮಾಲೀಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳೀಯ ಶಾಸಕಿ ಅದಿತಿ ವಿಜಯಲಕ್ಷ್ಮಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿ ಮೃತ ಮಕ್ಕಳ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ.