ಬೆಂಗಳೂರು: ನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರಿಸಿದೆ. ಬಹುತೇಕ ಎಲ್ಲ ಭಾಗಗಳಲ್ಲೂ ಮಳೆಯಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಶಾಂತಿನಗರ, ಡಬಲ್ ರೋಡ್, ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಜಯನಗರ, ವಿಜಯನಗರ, ಚಾಮರಾಜಪೇಟೆ, ಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್, ತುಮಕೂರು ರಸ್ತೆ, ಮೈಸೂರು ರಸ್ತೆ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಗಳು ಜಲಾವೃತಗೊಂಡಿದ್ದವು. ವಾಹನ ಸವಾರರು ಮನೆ ತಲುಪಲು ಪರದಾಡಿದರೆ ನೀರು ನುಗ್ಗಿದ ಬಡಾವಣೆಗಳ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಲು ಪರದಾಡುತ್ತಿದ್ದರು. ಅಷ್ಟೇ ಅಲ್ಲ, ವಾಹನ, ಫ್ರಿಡ್ಜ್, ಸಾಮಾನು ಸರಂಜಾಮುಗಳು ನೀರಿನಿಂದ ಹಾಲಾಗಿರುವುದನ್ನು ತೋರಿಸಿ ನಿವಾಸಿಗಳು ಕಣ್ಣೀರು ಹಾಕುತ್ತಿದ್ದರು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಪರದಾಡುವಂತಾಗಿತ್ತು.
ಇನ್ನೂ 5-6 ದಿನ ಮಳೆಯಾಗುವ ಸಂಭವವಿದ್ದು, ನಾಗರೀಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮತ್ತು ಬಿಬಿಎಂಪಿ ಮನವಿ ಮಾಡಿಕೊಂಡಿದೆ.
ಸುಬ್ಬಯ್ಯ ಸರ್ಕಲ್ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದರೆ, ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿ ಒಳಗೆ ನೀರು ನುಗ್ಗಿದೆ. ಸಿಸಿಬಿ ಕಚೇರಿ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಡಬಲ್ ರೋಡ್ ನಲ್ಲಿ ಮೊಣಕಾಲಿನವರೆಗೂ ನೀರು ಹರಿದಿದೆ. ಭಾನುವಾರ ತಡರಾತ್ರಿ 1.30 ರ ನಂತರ ಪ್ರಾರಂಭವಾದ ಮಳೆ ಸುಮಾರು 8 ರಿಂದ 9 ತಾಸು ಸುರಿದಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಸಾಯಿ ಲೇಔಟ್ ಮುಳುಗಿಹೋಗಿತ್ತು. ಸಿಟಿ ಮಾರ್ಕೆಟ್, ಜಯನಗರ, ಬಿಟಿಎಂ ಲೇಔಟ್, ಯಶವಂತಪುರ ಪ್ರದೇಶಗಳಲ್ಲಿಯೂ ಭಾರೀ ಮಳೆಯಾಗಿದ್ದು, ಪ್ರವಾಹ ಬಂದಿದೆಯೇ ಎಂದು ಭಾಸವಾಗುತ್ತಿತು.
ಮಳೆ ನಿಂತರೂ ಮಳೆಯಿಂದಾಗಿ ಸೃಷ್ಟಿಯಾದ ಅವಾಂತರದಿಂದ ಇಂದು ಬಳೆಗ್ಗೆ ಕೆಲಸ ಕಾರ್ಯಗಳಿಗೆ ತೆರಳುವವರು ಕಷ್ಟಪಡುತ್ತಿದ್ದರು. ಅಲ್ಲಲ್ಲಿ ನೀರು ನಿಂತು ವಾಹನಗಳ ಚಲನೆಗೆ ಅಡ್ಡಿಯಾಗಿತ್ತು. ಜೆಸಿ ರಸ್ತೆ, ಗೊರಗುಂಟೆಪಾಳ್ಯ, ಹೆಬ್ಬಾಳ ಸುತ್ತಮುತ್ತ ರಸ್ತೆಗಳಲ್ಲಿ ಆಳವಾದ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.