ನವದೆಹಲಿ: ಭಯೋತ್ಪಾದಕ ಸಂಘಟನೆ ಐಎಸ್ ಐಎಸ್ ನ ಸ್ಲೀಪರ್ ಸೆಲ್ ನ ಇಬ್ಬರು ಭಯೋತ್ಪಾದಕರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಅಬ್ದುಲ್ ಫಯಾಜ್ ಶೇಖ್ (ಡೈಪರ್ವಾಲಾ) ಮತ್ತು ತಲ್ಲಾ ಖಾನ್ ಬಂಧಿತ ಉಗ್ರರು. ಮಹಾರಾಷ್ಟ್ರದ ಪುಣೆಯಲ್ಲಿ ಐಇಡಿ ಸ್ಪೋಟಕಗಳನ್ನು ಸಿದ್ಧಪಡಿಸಿ ಪರೀಕ್ಷಿಸಿದ 2023ರ ಪ್ರಕರಣದಲ್ಲಿ ಈ ಇಬ್ಬರನ್ನೂ ಎನ್ ಐಎ ತಲಾಶ್ ಮಾಡುತ್ತಿತ್ತು. ಇಂಡೊನೇಷ್ಯಾದ ಜಕಾರ್ತದಿಂದ ಈ ಇಬ್ಬರು ಭಾರತಕ್ಕೆ ಹಿಂತಿರುಗುತ್ತಿದ್ದಂತೆ ಶುಕ್ರವಾರ ರಾತ್ರಿ ಬಂಧಿಸಲಾಗಿದೆ ಎಂದು ಎನ್ ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈ ಇಬ್ಬರು ಆರೋಪಿಗಳ ವಿರುದ್ಧ ಎನ್ ಐಎ ವಿಶೇಷ ನ್ಯಾಯಾಲಯವು ಬಂಧನ ರಹಿತ ವಾರಂಟ್ ಹೊರಡಿಸಿತ್ತು. ಅಪರಾಧ ಕೃತ್ಯಗಳ ಪಿತೂರಿ ನಡೆಸುತ್ತಿದ್ದ ಇವರ ಕುರಿತು ಮಾಹಿತಿ ನೀಡಿದವರಿಗೆ ರೂ.3 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿತ್ತು.
ಇರಾಕ್ ಮತ್ತು ಸಿರಿಯಾದ ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ ಪುಣೆಯ ಎಂಟು ಸ್ಟೀಪರ್ ಸೆಲ್ ಸದಸ್ಯರನ್ನು ಎನ್ ಐಎ ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭಾರತದಲ್ಲಿ ಶಾಂತಿ ಭಂಗ ಮತ್ತು ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡಲು ಇವರು ಸಂಚು ರೂಪಿಸುತ್ತಿದ್ದರು. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ತರುವ ಹಾಗೂ ಐಎಸ್ ಐಎಸ್ ಕಾರ್ಯಸೂಚಿಯನ್ನು ಜಾರಿ ಮಾಡುವ ತಂತ್ರವನ್ನು ರೂಪಿಸುವ ಉದ್ದೇಶದಿಂದ ದೇಶದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನಾ ಕೃತ್ಯ ಎಸಗಲು ಯೋಜನೆ ಹೊಂದಿದ್ದರು ಎಂದು ಎನ್ ಐಎ ಮೂಲಗಳು ತಿಳಿಸಿವೆ.
ಇದೇ ಪ್ರಕರಣದಲ್ಲಿ ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನಸ್ ಸಕಿ, ಅಬ್ದುಲ್ ಖಾದಿರ್ ಪಠಾಣ್, ಸಿಂಬಾ ನಾಸಿರುದ್ದೀನ್ ಖಾಜಿ, ಝುಲ್ಪಿಕರ್ ಅಲಿ ಬರೋಡ್ವಾಲಾ, ಶಮಿಲ್ ನಚಾನ್, ಅಕೀಫ್ ನಚಾನ್ ಮತ್ತು ಶಾನ್ವಾಜ್ ಆಲಂರನ್ನು ಎನ್ ಐಎ ಈಗಾಗಲೇ ಬಂಧಿಸಿದೆ.