ಬೆಂಗಳೂರು: ಆಫ್ರಿಕಾ ದೇಶದ ಪ್ರಜೆಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನಿಂದ ರೂ.4 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈತ ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ, ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಚ್ಯುತನಗರದ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಇಬ್ಬರು ವಿದೇಶಿ ಪ್ರಜೆಗಳು ವಾಸಿಸುತ್ತಿದ್ದರು. ಇವರು ಮಾದಕವಸ್ತು ಎಂಡಿಎಂಎ ಕ್ರಿಸ್ಟಲ್ ಅನ್ನು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಲಭಿಸಿತ್ತು.
ಸಿಸಿಬಿ ಪೊಲೀಸರು ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇವರ ಮನೆ ಮೇಲೆ ದಾಳಿ ನಡೆಸಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ 2 ಕೆಜಿ 585 ಗ್ರಾಂ.ಎಂಡಿಎಂಎ ಕ್ರಿಸ್ಟಲ್, ದ್ವಿಚಕ್ರ ವಾಹನ ಮತ್ತು ಒಂದು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಈ ಡ್ರಗ್ಸ್ ಮೌಲ್ಯ 4 ಕೋಟಿ ರೂ. ಎಂದು ತಿಳಿದು ಬಂದಿದೆ.
ಆರೋಪಿಯು ವ್ಯಾಪಾರ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದು, ಅವಧಿ ಮುಗಿದಿದ್ದರೂ ಮರಳದೆ ಇಲ್ಲಿಯೇ ನೆಲೆಸಿದ್ದ. ದಾಳಿ ವೇಳೆ ಮತ್ತೊಬ್ಬ ವಿದೇಶಿ ಪ್ರಜೆ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.