ವೈದ್ಯರು, ಶುಶ್ರೂಷಕರ ವೇತನ ಶೇ.55 ರವರೆಗೆ ವೇತನ ಹೆಚ್ಚಳ: ಸಚಿವ ದಿನೇಶ್‌ ಗುಂಡೂರಾವ್‌

Most read

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಶುಶ್ರೂಷಕರ ಕೊರತೆಯನ್ನು ನಿವಾರಿಸಲು ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ ಎಚ್‌ ಎಂ) ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಶುಶ್ರೂಷಕರ ವೇತನವನ್ನು ಆರೋಗ್ಯ ಇಲಾಖೆಯು ಹೆಚ್ಚಳ ಮಾಡಿದೆ. ಆದರೆ ಇದು ಹೊಸದಾಗಿ ನೇಮಕವಾಗುವ ವೈದ್ಯರು ಹಾಗೂ ಶುಶ್ರೂಷಕರಿಗೆ ಮಾತ್ರ ಅನ್ವಯವಾಗಲಿದ್ದು ಈಗಾಗಲೇ ಕರ್ತವ್ಯದಲ್ಲಿರುವ ವೈದ್ಯರು ಮತ್ತು ಶುಶ್ರೂಷಕರಿಗೆ ಅನ್ವಯಿಸುವುದಿಲ್ಲ.

ಎನ್‌ ಎಚ್‌ ಎಂ ಯೋಜನೆಯಡಿ ಮಂಜೂರಾಗಿದ್ದ 1,398 ಎಂಬಿಬಿಎಸ್ ವೈದ್ಯರ ಹುದ್ದೆಗಳಲ್ಲಿ 579 ಹುದ್ದೆಗಳು ಖಾಲಿ ಇವೆ. 899 ತಜ್ಞ ವೈದ್ಯರ ಹುದ್ದೆಗಳಲ್ಲಿ 305 ಹುದ್ದೆಗಳು ಭರ್ತಿಯಾಗಿಲ್ಲ. 9,041 ಶುಷ್ರೂಷಕರ ಹುದ್ದೆಗಳಿದ್ದು, 8,105 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 936 ಹುದ್ದೆಗಳು ಖಾಲಿ ಉಳಿದಿವೆ. ಆದ್ದರಿಂದ ವೇತನ ಪರಿಷ್ಕರಿಸಿ, ಖಾಲಿ ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಿದೆ.

ಎಂಬಿಬಿಎಸ್ ವೈದ್ಯರಿಗೆ ಪ್ರಸ್ತುತ ರೂ. 46,895ರಿಂದ ರೂ.50 ಸಾವಿರದವರೆಗೆ ವೇತನ ನೀಡಲಾಗುತ್ತಿದ್ದು, ಈಗ ವೇತನವನ್ನು 60 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.  ತಜ್ಞ ವೈದ್ಯರ ವೇತನವನ್ನು ರೂ.1.10 ಲಕ್ಷದಿಂದ ರೂ.1.30 ಲಕ್ಷವಿದ್ದು, ರೂ. 1.40 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಶುಶ್ರೂಷಕರ ವೇತನ 14,186 ರೂ.ಗಳಿಂದ 18,774 ರೂ.ಗಳಿಷ್ಟಿದ್ದು, ಆ ವೇತನವನ್ನು  ರೂ. 22 ಸಾವಿರಕ್ಕೆ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ತಜ್ಞ ವೈದ್ಯರ ಹುದ್ದೆಗೆ ಅನುಭವ ಹೊಂದಿದ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ಪ್ರತಿ ವರ್ಷವೂ ಅವರ ಅನುಭವಕ್ಕೆ ತಕ್ಕಂತೆ ವೇತನದಲ್ಲಿ ಶೇ 2.5 ರಷ್ಟು ಹೆಚ್ಚಳ ಮಾಡಲಾಗುತ್ತದೆ. ಪರಿಷ್ಕೃತ ವೇತನವು ಹೊಸದಾಗಿ ನೇಮಕಗೊಂಡ ಸಿಬ್ಬಂದಿಗೆ ಮಾತ್ರ ಅನ್ವಯಿಸಲಿದೆ. ಹಾಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ವೇತನವನ್ನು ಪ್ರತಿ ವರ್ಷ ಶೇ.5 ರಷ್ಟು ಹೆಚ್ಚಿಸುತ್ತಾ ಬರಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

 ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಲಿ ಪಡೆಯುತ್ತಿರುವ ವೇತನ ಶ್ರೇಣಿಯಲ್ಲಿಯೇ ಮುಂದುವರಿಯುತ್ತಾರೆ. ಅವರು ರಾಜೀನಾಮೆ ಸಲ್ಲಿಸಿ, ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅನುಭವದ ಆಧಾರದ ಮೇಲೆ ಅವರಿಗೂ ಆದ್ಯತೆ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾದ್ದರಿಂದ ಎನ್‌ ಎಚ್‌ ಎಂ ಅಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಲಾಗಿಲ್ಲ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದ್ದು  ಎರಡು ಮೂರು ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ. ಆಗ ಕೂಡಲೇ ವೇತನ ಪಾವತಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

More articles

Latest article