ಬೆಂಗಳೂರು: ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ ಹಾಗೂ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಗೌರವ ಧನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಸರ್ಕಾರಿ ಶಾಲಾ-ಕಾಲೇಜಿನ ಅತಿಥಿ ಶಿಕ್ಷಕ, ಉಪನ್ಯಾಸಕರಿಗೆ ನಿಜಕ್ಕೂ ಇದು ಸಿಹಿಸುದ್ದಿಯಾಗಿದೆ.
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವಧನವನ್ನು ತಲಾ ರೂ.2 ಸಾವಿರ ಹೆಚ್ಚಳ ಮಾಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಪ್ರಸ್ತುತ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುವ ಅತಿಥಿ ಶಿಕ್ಷಕರಿಗೆ ರೂ.10 ಸಾವಿರ, ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ರೂ.10,500 ಹಾಗೂ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ರೂ.12 ಸಾವಿರ ನೀಡಲಾಗುತ್ತಿದೆ. 2025–26ನೇ ಶೈಕ್ಷಣಿಕ ಸಾಲಿನಿಂದ ಕ್ರಮವಾಗಿ ರೂ.12 ಸಾವಿರ, ರೂ.12,500 ಹಾಗೂ ರೂ.14 ಸಾವಿರ ಪಡೆಯಲಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ವರಿಷ್ಕರಿಸಿ ಆದೇಶಿಲಾಗಿದೆ.
ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ ಹೆಚ್ಚಳದ ವಿವರ ಇಲ್ಲಿದೆ.
* ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ರೂ.10,000ದಿಂದ ರೂ.12,000ಕ್ಕೆ ಗೌರವಧನ ಹೆಚ್ಚಳ
* ಸರ್ಕಾರಿ ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ರೂ.10,500ರಿಂದ ರೂ.12,500ಕ್ಕೆ ಹೆಚ್ಚಳ
* ಸರ್ಕಾರಿ ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರಿಗೆ ರೂ.12,000ದಿಂದ ರೂ.14,000ಕ್ಕೆ ಗೌರವಧನ ಹೆಚ್ಚಳ