ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿ : ಸಿಎಂ ಸಿದ್ದರಾಮಯ್ಯ ಘೋಷಣೆ; ಹೀಗಿರಲಿದೆ ಜಿಬಿಎ ಸ್ವರೂಪ

Most read

ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ ಜಾರಿಯಾಗಿದೆ. ಬಿಬಿಎಂಪಿ  ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಇನ್ನು ಮುಂದೆ ಬೆಂಗಳೂರು,  ಗ್ರೇಟರ್ ಬೆಂಗಳೂರು ಆಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಮಳೆಯಿಂದಾಗಿ ಅನಾಹುತಗಳು ನಡೆಯುತ್ತಿದ್ದು, ಮಳೆಯಿಂದಾಗಿ ಸಂಭವಿಸುವ ಅನಾಹುತಗಳಿಗೆ ಪರಿಹಾರ  ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರೇಟರ್‌ ಬೆಂಗಳೂರು ಸ್ವರೂಪ ಹೇಗಿರಲಿದೆ?

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಯಾದ ನಂತರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ನಾಲ್ಕು ತಿಂಗಳಲ್ಲಿ ರಚನೆಯಾಗಲಿದೆ. ಆಡಳಿತಾಧಿಕಾರಿ ನೇಮಕಗೊಳ್ಳಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರದೇಶ (ಜಿಬಿಎ) ಗಡಿ ಗುರುತು ನಡೆಯಲಿದೆ. ಆನಂತರ ಹಂತಹಂತವಾಗಿ ಬಿಬಿಎಂಪಿ ಅಸ್ತಿತ್ವ ಕಳೆದುಕೊಳ್ಳಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ  ಸಿಎಂ ಅಧ್ಯಕ್ಷರಾದರೆ ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಗ್ರೇಟ‌ರ್ ಬೆಂಗಳೂರು ವ್ಯಾಪ್ತಿಯ ಶಾಸಕರು, ಸಚಿವರು, ನಗರಾಭಿವೃದ್ಧಿ ಸಚಿವರು, ಪಾಲಿಕೆಗಳ ಮೇಯರ್‌ ಗಳು, ಬಿಡಿಎ ಆಯುಕ್ತ, ಬೆಂಗಳೂರು ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಕಂದಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಪೊಲೀಸ್ ಕಮಿಷನ‌ರ್, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿರ್ದೇಶಕ, ನಗರ ಭೂಸಾರಿಗೆ ನಿರ್ದೇಶನಾಲಯದ ಆಯುಕ್ತ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತ ಸದಸ್ಯರಾಗಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ನಗರದ ಕೈಗಾರಿಕಾ ಪ್ರದೇಶಗಳಲ್ಲದೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ಕ್ಕೆ ಸೇರಿಸಿಕೊಂಡು ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆ ಇದೆ.

ತೆರಿಗೆ ಪಾವತಿ, ವ್ಯಾಪ್ತಿ, ಅಧಿಕಾರಿಗಳ ಕರ್ತವ್ಯಗಳಲ್ಲಿ ಚಲಾವಣೆಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಜಿಬಿಎ ಜಾರಿಯಾದ ಮೇಲೆ ಹಂತಹಂತವಾಗಿ ಅಧಿಸೂಚನೆ ಹೊರಡಿಸಿ ಒಂದೊಂದೇ ಯೋಜನೆಗಳು ‘ಜಿಬಿಎ’ಯೊಂದಿಗೆ ಜೋಡಣೆಯಾಗಲಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರದೇಶವೆಂದು ಮೇ 15ರಂದು ಅಧಿಸೂಚನೆ ಹೊರಡಿಸಲಾಗುವುದು. ಗ್ರೇಟರ್ ಬೆಂಗಳೂರು ಪೂರ್ಣಗೊಳ್ಳುವವರೆಗೆ ಜಿಬಿಎ ಕಾಯ್ದೆಯ ಕಲಂ 7(5) ಮತ್ತು ಕಲಂ 360 ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ ಬಿಬಿಎಂಪಿ ಅಧಿಕಾರ ಮತ್ತು ಕರ್ತವ್ಯಗಳನ್ನು ಸಂಬಂಧಿತ ಅಧಿಕಾರಿಗಳು ಚಲಾಯಿಸುತ್ತಾರೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.

More articles

Latest article