ಬೆಂಗಳೂರು: ದಕ್ಷ ಆಡಳಿತಗಾರ, ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ಅವರ ಪುತ್ಥಳಿಯನ್ನು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿಯ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾಗಿ ಗುಂಡೂರಾವ್ ಅವರು ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪುತ್ಥಳಿಯನ್ನು ಅನಾವರಣಗೊಳಿಸುವ ಮೂಲಕ ಅವರ ದಕ್ಷ ಆಡಳಿತ ಹಾಗೂ ಅವರು ನೀಡಿದ ಜನಪರ ಕಾರ್ಯಗಳನ್ನ ಸ್ಮರಿಸುವ ಅವಕಾಶ ದೊರೆಕಿದೆ. ಇಂದಿರಾ ಗಾಂಧಿ, ಸಂಜಯ್ ಗಾಂಧಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಆರ್. ಗುಂಡೂರಾವ್ ಅವರು ಧೈರ್ಯದಿಂದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಶಾಸಕರ ಒತ್ತಡಕ್ಕೆ ಮಣಿಯುತ್ತಿರಲಿಲ್ಲ. ವರ್ಗಾವಣೆ ದಂಧೆಗೆ ಕಡಿವಾಣ ಹಾಕುವ ಕೆಲಸ ಮಾಡಿದ್ದರು. ದೇವರಾಜ್ ಅರಸು ಹಾಗೂ ಆರ್. ಗುಂಡೂರಾವ್ ಅವರ ರಾಜಕೀಯ ಪ್ರಸಂಗಗಳನ್ನು ನೆನಪು ಮಾಡಿಕೊಂಡು ಸಿಎಂ ಅವರು ಗುಂಡೂರಾವ್ ಅವರು ಜಾತಿ ನೋಡಲಿಲ್ಲ. ಜನಪರ ಕೆಲಸಗಳಿಗೆ ಸದಾ ಸ್ಪಂದಿಸುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ, ಆರ್ ಗುಂಡೂರಾವ್ ಅವರ ಪುತ್ರರು ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಜ್ಯದ ಮುಖ್ಯಮಂತ್ರಿಯವರಾಗಿದ್ದ ನಮ್ಮ ತಂದೆಯವರು 40 ವರ್ಷಗಳ ಹಿಂದೆಯೇ ಬೆಂಗಳೂರು ನಗರದ ಬೆಳವಣಿಗೆಯ ದೂರದೃಷ್ಟಿಯಿಟ್ಟುಕೊಂಡು ಮೆಜೆಸ್ಟಿಕ್ ನಂತಹ ಬಸ್ ಸ್ಟಾಂಡ್ ಕಟ್ಟಿಸಿದರು. ಇಂದು ಅದೇ ಬಸ್ ಸ್ಟಾಂಡ್ ನ ಆವರಣದಲ್ಲಿ ತಂದೆಯವರ ಪುತ್ಥಳಿ ಅನಾವರಣಗೊಂಡಿರುವುದು ಸಂತೋಷದ ಸಂಗತಿ. ರಾಜಕೀಯ ಬೆಳವಣಿಗೆಗಳ ನಡುವೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ದೊರೆಯಿತು. ಒಂದು ಸಾಮಾನ್ಯ ಬ್ರಾಹ್ಮಣ ಕುಟುಂಬದಿಂದ ಬಂದವರು ಮುಖ್ಯಂತ್ರಿಯಾಗುವುದು ಅಷ್ಟು ಸುಲಭವಲ್ಲ. ದೇವರಾಜ್ ಅರಸ್ ಅವರ ಸಂಪುಟದಲ್ಲಿ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತವನ್ನ ನೀಡಿದ್ದಾರೆ ಎಂದರು. ಬೆಂ
ಗಳೂರು ನಗರದ ಬೆಳವಣಿಗೆಗೆ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ರಾಜ್ಯದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳನ್ನ ನೀಡಿದರು. ಬೆಂಗಳೂರು ಕಾವೇರಿ ಹಂತ – 2, ರೈತರಿಗೆ ಉಚಿತ ವಿದ್ಯುತ್, ವಿಧಾನ ಸೌಧದ ಎದುರು ಅಂಬೇಡ್ಕರ್ ಪ್ರತಿಮೆ ನಿರ್ಮಾಣ, ಜಂಗಲ್ ಲಾಡ್ಜ್ ಗಳ ಮೂಲಕ ಪ್ರವಾಸೋಮ್ಯಕ್ಕೆ ಪ್ರೋತ್ಸಾಹ ನೀಡಿದರು. ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆಸುವುದು ಸೇರಿದಂತೆ ಹಲವು ಉತ್ತಮ ಕಾರ್ಯಗಳನ್ನ ಮಾಡುವ ಮೂಲಕ ರಾಜ್ಯಕ್ಕೆ ದಕ್ಷ ಆಡಳಿತವನ್ನ ಆರ್. ಗುಂಡೂರಾವ್ ಅವರು ನೀಡಿದರು ಎಂದು ದಿನೇಶ್ ಗುಂಡೂರಾವ್ ಹೇಳಿದರು.
15ನೇ ಹಣಕಾಸು ಆಯೋಗದಡಿಯಲ್ಲಿ ವಾಯುಗುಣಮಟ್ಟದ ಸುಧಾರಣೆಗಾಗಿ 2020-21ನೇ ಸಾಲಿನಲ್ಲಿ ಬಿಡುಗಡೆ ಮಾಡಿರುವ ಅನುದಾನದಡಿಯಲ್ಲಿ ಆಯ್ದ 25 ಜಂಕ್ಷನ್ ಗಳನ್ನು ಅಭಿವೃದ್ಧಿ ಪಡಿಸುವ ಕಾಮಗಾರಿಗಳ ಪೈಕಿ ಆರ್. ಗುಂಡೂರಾವ್ ವೃತ್ತವನ್ನು ಆಧುನಿಕ ರೀತಿಯಲ್ಲಿ ಅಭಿವೃದ್ದಿಪಡಿಸಲಾಗಿದೆ. ಸದರಿ ವೃತ್ತದಲ್ಲಿ ವಾಯುಗುಣಮಟ್ಟ ಸುಧಾರಣೆಗಾಗಿ ನೂತನ ತಾಂತ್ರಿಕ ವಿನ್ಯಾಸದಿಂದ ನಿರ್ಮಿಸಲಾಗಿದ್ದು, ವೃತ್ತದ ಮುಖಾಂತರ ಒಟ್ಟು 4 ಪ್ರಮುಖ ರಸ್ತೆಗಳು ಹಾದು ಹೋಗುತ್ತಿದ್ದು, ಮುಖ್ಯವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹಾಗೂ ಮೆಜೆಸ್ಟಿಕ್ ಕಡೆಗೆ ಸಂಪರ್ಕ ಕಲ್ಪಿಸಿಕೊಡುತ್ತದೆ. ವೃತ್ತದಲ್ಲಿ ಪಾದಾಚಾರಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಾಗವಾಗಿ ಹಾಗೂ ಸುರಕ್ಷತವಾಗಿ ಹಾದು ಹೋಗಲು ತಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಪಾದಾಚಾರಿಗಳು, ಮೆಜೆಸ್ಟಿಕ್ ಹಾಗೂ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ವಿಶ್ರಮಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಆಸನಗಳ ವ್ಯವಸ್ಥೆ, ಮನರಂಜಿಸುವ ಕಾರಂಜಿಗಳು, ಆಕರ್ಷಕ ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ವೃತ್ತದ ಒಳಗೆ ಹಾಗೂ ಸುತ್ತಮುತ್ತ ಹಸಿರು ಗಿಡಗಳನ್ನು ನೆಡಲಾಗಿದೆ.