ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳಾಗಿದ್ದು, ಬಿಯರ್ ಬೆಲೆಯನ್ನು ನಾಲ್ಕನೇ ಬಾರಿಗೆ ಏರಿಸಲಾಗಿದೆ. ಪ್ರಸ್ತುತ ಬಿಯರ್ ಮೇಲೆ ಶೇ.195 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದ್ದು ಇದೀಗ ಶೇ.2೦0 ರಷ್ಟು ಹೆಚ್ಚಳ ಮಾಡಲಾಗಿದೆ. ಅಂದರೆ ಪ್ರತಿ ಬಿಯರ್ ಬಾಟಲ್ ಬೆಲೆ 10 ರೂ. ಹೆಚ್ಚಳವಾಗಲಿದೆ. ಕಡಿಮೆ ದರದ ಐಎಂಎಲ್ ಬ್ರ್ಯಾಂಡ್ ಗಳ ಮದ್ಯದ ಬೆಲೆಯೂ 180 ಎಂಎಲ್ ಗೆ ರೂ. 15 ರಿಂದ 20 ರೂ. ಹೆಚ್ಚಳವಾಗಲಿದೆ.
ಆರಂಭದಲ್ಲಿ ಶೇ.10ರ ದರದಲ್ಲಿ ಶೇ.195 ರಿಂದ ಶೇ.205 ರಷ್ಟು ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಮದ್ಯ ಮಾರಾಟಗಾರರ ಸಂಘ ಬೆಲೆ ಏರಿಕೆಯನ್ನು ವಿರೋಧಿಸಿದ್ದರಿಂದ ಶೇ.5 ರಷ್ಟು ಮಾತ್ರ ಹೆಚ್ಚಿಸಲಾಗಿದೆ.
ಐಎಂಎಲ್ ನ 16 ಸ್ಲ್ಯಾಬ್ ಗಳನ್ನು ವಿವಿಧ ಹೆಚ್ಚುವರಿ ಅಬಕಾರಿ ತೆರಿಗೆಗಳ ಆಧಾರದ ಮೇಲೆ ವಿಭಾಗಿಸಲಾಗಿದೆ. ಮೊದಲ ನಾಲ್ಕು ಸ್ಲ್ಯಾಬ್ ಗಳ ತೆರಿಗೆಯನ್ನು ಹೆಚ್ಚಿಸಲಾಗಿದೆ. ಮದ್ಯದ ಕಂಪನಿಗಳು ಬೆಲೆ ಏರಿಕೆಯನ್ನು ತಾವೇ ಭರಿಸುತ್ತವೆಯೇ ಅಥವಾ ಗ್ರಾಹಕರಿಗೆ ವರ್ಗಾಯಿಸಲಾತ್ತದೆಯೇ ಎಂಬ ಆಧಾರದ ಮೇಲೆ ಬಿಯರ್ ಬೆಲೆ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.
ಬೆಲೆ ಏರಿಕೆಯ ಪರಿಣಾಮ ಬಿಯರ್ ಮಾರಾಟ ಶೇ.1 ರಷ್ಟು ಕಡಿಮೆಯಾಗಿದೆ. ಇಂತಹ ಬೆಳವಣಿಗೆಗಳು ಸರ್ಕಾರದ ಆದಾಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಮದ್ಯ ಮಾರಾಟಗಾರರು ಅಭಿಪ್ರಾಯಪಡುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಮದ್ಯ ಮಾರಾಟ ಶೇ.3ರಷ್ಟು ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಬೆಲೆ ಏರಿಕೆಯನ್ನು ಇಳಿಕೆ ಮಾಡದಿದ್ದರೆ ರಾಜ್ಯಕ್ಕೆ ನೆರೆ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಣೆ ಆಗಬಹುದು ಎಂದೂ ಎಚ್ಚರಿಸಿದೆ.