ಆಸ್ತಿ ಮಾಲೀಕರಿಗೆ ಗುಡ್‌ ನ್ಯೂಸ್;‌ ಬಿ-ಖಾತಾ ಅವಧಿ 3 ತಿಂಗಳವರೆಗೆ ವಿಸ್ತರಣೆ; ಸಚಿವ ಬಿ.ಎಸ್.ಸುರೇಶ್

Most read

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ಖಾತಾ ನೀಡುವ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿರುವ ಅವರು, ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಂದರೆ, ಯಾವುದೇ ಪರವಾನಗಿ, ಭೂಪರಿವರ್ತನೆ ಮಾಡಿಸಿಕೊಳ್ಳದೇ, ನಕ್ಷೆ ಮಂಜೂರಾತಿ ಮಾಡಿಕೊಳ್ಳದೇ ಕಂದಾಯ ನಿವೇಶನಗಳಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದರೆ ಅಂತಹವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿ-ಖಾತ ನೀಡಿ ಸಕ್ರಮಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು ಎಂದಿದ್ದಾರೆ.

ಇದರನ್ವಯ ನಾಗರಿಕರಿಗೆ ಒಂದು ಬಾರಿಯ ಅವಕಾಶವನ್ನು ನೀಡಲಾಗಿತ್ತು. ನಾಗರಿಕರು ನಿಗದಿತ ಶುಲ್ಕಗಳನ್ನು ಪಾವತಿ ಮಾಡಿ ತಮ್ಮ ಕಟ್ಟಡಗಳಿಗೆ ಬಿ-ಖಾತಾ ಪಡೆದುಕೊಳ್ಳಬಹುದಾಗಿದೆ. ಈ ಅವಕಾಶವನ್ನು ಮೇ ತಿಂಗಳ 10 ರ ವೇಳೆಗೆ ಬಿ-ಖಾತಾ ಪಡೆದುಕೊಳ್ಳಲು ಸಮಯ ನೀಡಲಾಗಿತ್ತು.

ರಾಜ್ಯದ ಮಹಾನಗರಪಾಲಿಕೆಗಳು ಮತ್ತು ನಗರ ಪ್ರದೇಶಗಳಲ್ಲಿ 30 ಲಕ್ಷಕ್ಕೂ ಅಧಿಕ ಇಂತಹ ಅನಧಿಕೃತ ಕಟ್ಟಡಗಳು/ಮನೆಗಳು/ನಿವೇಶನಗಳಿವೆ ಎಂದು ಅಂದಾಜಿಸಲಾಗಿದೆ. ಸರ್ಕಾರ ಒಂದು ಬಾರಿಯ ಅವಕಾಶ ನೀಡಿದ ನಂತರ ನಾಗರಿಕರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿ ತಮ್ಮ ಆಸ್ತಿಗಳಿಗೆ ಬಿ-ಖಾತಾ ಪಡೆದುಕೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

2 ಲಕ್ಷ ಬಿ-ಖಾತಾ ವಿತರಣೆ

ಸರ್ಕಾರ ನೀಡಿದ ಅವಕಾಶವನ್ನು ಬಳಸಿಕೊಂಡಿರುವ ಸುಮಾರು 10 ಲಕ್ಷ ಆಸ್ತಿಗಳಿಗೆ ಬಿ-ಖಾತಾ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ಪೈಕಿ 2 ಲಕ್ಷ ಆಸ್ತಿಗಳಿಗೆ ಬಿ-ಖಾತೆಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಹಂತಹಂತವಾಗಿ ಬಿ-ಖಾತಾ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಮೂರು ತಿಂಗಳು ವಿಸ್ತರಣೆ

ಸರ್ಕಾರದ ಈ ನಾಗರಿಕ ಸ್ನೇಹಿ ಸೌಲಭ್ಯವನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ವಿತರಣೆ ಪ್ರಕ್ರಿಯೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಬಿ.ಎಸ್.ಸುರೇಶ ತಿಳಿಸಿದ್ದಾರೆ.

ಜಿಪಿಎ, ಕರಾರುದಾರರಿಗೂ ಸೌಲಭ್ಯ:

ಇನ್ನು ನಿವೇಶನ ಅಥವಾ ಕಟ್ಟಡಗಳನ್ನು ಖರೀದಿಸಲು ಮುಂದಾಗಿ ಜಿಪಿಎ ಅಥವಾ ಅಗ್ರೀಮೆಂಟ್ ಮಾಡಿಕೊಂಡಿರುವ ನಾಗರಿಕರಿಗೂ ಬಿ-ಖಾತಾ ವಿತರಣೆಗೆ ಗಂಭೀರ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಿಂದ ಜಿಪಿಎ ಅಥವಾ ಕರಾರುದಾರರಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

More articles

Latest article