ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮತ್ತೆ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ; ಪಾಕ್‌ ಹ್ಯಾಕರ್‌ ಗಳಿಂದ 15 ಲಕ್ಷ ಸೈಬರ್‌ ದಾಳಿ

Most read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು (ಮಂಗಳವಾರ) ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆ ಪ್ರತಿದಾಳಿ ನಡೆಸಿವೆ. ಗುಂಡಿನ ಕಾಳಗ ಮುಂದುವರಿದಿದ್ದು, ಎರಡೂ ಕಡೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್‌ ಹ್ಯಾಕರ್‌ ಗಳಿಂದ 15 ಲಕ್ಷ ಸೈಬರ್‌ ದಾಳಿ; ಯಶಸ್ವಿಯಾದ ಹ್ಯಾಕರ್‌ ಗಳು ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿರುವ ಏಳು ಅಡ್ವಾನ್ಸ್‌ ಡ್‌ ಎಟಿಪಿ ಗುಂಪುಗಳು ಭಾರತದ ಪ್ರಮುಖ ಮೂಲಸೌಕರ್ಯ ವೆಬ್‌ ಸೈಟ್‌ ಗಳನ್ನು ಗುರಿಯಾಗಿಸಿ ಸುಮಾರು 15 ಲಕ್ಷ ಸೈಬರ್‌ ದಾಳಿಗಳನ್ನು ನಡೆಸಿದೆ ಎಂದು ಮಹಾರಾಷ್ಟ್ರ ಸೈಬರ್‌ ವಿಭಾಗ ತಿಳಿಸಿದೆ.

ಪಹಲ್ಲಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ನಂತರ ಸೈಬರ್‌ ದಾಳಿಗಳು ಹೆಚ್ಚುತ್ತಿವೆ. ದಾಳಿಗಳ ತೀವ್ರತೆ ಹೆಚ್ಚಾಗಿದ್ದರೂ ಇವುಗಳಲ್ಲಿ 150 ದಾಳಿಗಳು ಮಾತ್ರ ಯಶಸ್ವಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ನಂತರ ಸರ್ಕಾರಿ ವೆಬ್‌ ಸೈಟ್‌ ಗಳ ಮೇಲಿನ ಸೈಬರ್ ದಾಳಿಗಳು ಇಳಿಮುಖವಾಗಿವೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ಮಧ್ಯಪ್ರಾಚ್ಯ ಮತ್ತು ಇಂಡೋನೇಷ್ಯಾ ಮೂಲದ ಗುಂಪುಗಳಿಂದ ಸೈಬರ್ ದಾಳಿ ನಡೆಯುತ್ತಿದೆ ಎಂದು ಮಹಾರಾಷ್ಟ್ರ ಸೈಬರ್ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಯಶಸ್ವಿ ಯಾದವ್ ಮಾಹಿತಿ ನೀಡಿದ್ದಾರೆ.

APT 36 ( ಪಾಕಿಸ್ತಾನ ಮೂಲ), ಪಾಕಿಸ್ತಾನ ಸೈಬರ್ ಫೋರ್ಸ್, ಟೀಮ್ ಇನ್ನೇನ್ ಪಿಕೆ, ಮಿಸ್ಟೀರಿಯಸ್ ಬಾಂಗ್ಲಾದೇಶ, ಇಂಡೋ ಹ್ಯಾಕ್ಸ್ ಸೆಕ್, ಸೈಬರ್ ಗ್ರೂಪ್ HOAX 1337, ಮತ್ತು ನ್ಯಾಷನಲ್ ಸೈಬರ್ ಕ್ರೂ ಈ 7 ಹ್ಯಾಕಿಂಗ್ ಗುಂಪುಗಳು ಒಟ್ಟಾಗಿ ಭಾರತೀಯ ವೆಬ್‌ ಸೈಟ್‌ ಗಳನ್ನು ಗುರಿಯಾಗಿಸಿ 15 ಲಕ್ಷಕ್ಕೂ ಅಧಿಕ ಸೈಬರ್ ದಾಳಿಗಳನ್ನು ನಡೆಸಿವೆ ಎಂದು ಅವರು ತಿಳಿಸಿದ್ದಾರೆ.

ಭಾರತ- ಪಾಕಿಸ್ತಾನ ನಡುವಿನ ಸಂಘರ್ಷ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದ್ದ 5 ಸಾವಿರಕ್ಕೂ ಹೆಚ್ಚು ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಮಹಾರಾಷ್ಟ್ರ ಸೈಬರ್ ಗುರುತಿಸಿ ಅಳಿಸಿ ಹಾಕಿದೆ. ಜನರು ತಪ್ಪು ಮಾಹಿತಿಯನ್ನು ನಂಬಬಾರದು ಮತ್ತು ವದಂತಿಗಳನ್ನು ಹರಡಬಾರದು. ವಿಶ್ವಾಸಾರ್ಹ ಮತ್ತು ಅಧಿಕೃತ ಮೂಲಗಳ ಸುದ್ದಿಗಳನ್ನು ಮಾತ್ರ ನಂಬಬೇಕು ಎಂದು ಅವರು ಮನವಿ ಮಾಡಿದ್ದಾರೆ.

More articles

Latest article