ಬೆಂಗಳೂರು: ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಪಾನಿಪೂರಿ, ಕಬಾಬ್, ಶವರ್ಮಾ ಮತ್ತು ಚಹಾದಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ನಿಷೇಧಿಸಿದ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಜಿಲೇಬಿ ಮತ್ತು ಶರಬತ್ ನಲ್ಲಿನ ಕಲಬೆರೆಕೆ ಕುರಿತು ಪತ್ತೆ ಹಚ್ಚಲು ನಿರ್ಧರಿಸಿದೆ.
ಜಿಲೇಬಿ ಮತ್ತು ಶರಬತ್ ಗುಣಮಟ್ವನ್ನು ಪರೀಕ್ಷಿಸಲು FSSAI ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲೇಬಿ ಮತ್ತು ಶರಬತ್ ನ ಮಾದರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ರಾಜ್ಯಾದ್ಯಂತ ಕನಿಷ್ಠ 250 ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಆಕರ್ಷಕವಾಗಿ ಕಾಣುವಂತೆ ಮಾಡಲು ಜಿಲೇಬಿ ತಯಾರಿಸುವಾಗ ಕೃತಕ ಬಣ್ಣಗಳನ್ನು ವ್ಯಾಪಕವಾಗಿ ಬಳಸುತ್ತಿರುವುದು ಕಂಡು ಬಂದಿದೆ. ಹಾಗಾಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಶರಬತ್ ಗೆ ಬೇಡಿಕೆ ಹೆಚ್ಚು. ಶರಬತ್ ನಲ್ಲಿ ಸಂರಕ್ಷಕ ಪದಾರ್ಥಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ದೀರ್ಘಾವಧಿವರೆಗೆ ಶರಬತ್ ರಕ್ಷಿಸಲು ರಾಸಾಯನಿಕಗಳನ್ನು ಮತ್ತು ಬಣ್ಣಗಳನ್ನು ಬಳಸಲಾಗುತ್ತಿದೆ. ಇದರಿಂದ ಶರಬತ್ ನ ಗುಣಮಟ್ಟ ಕಲಬೆರಕೆಯಾಗಿರುತ್ತದೆ ಅಥವಾ ಕಳಪೆಯಾಗಿರುತ್ತದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ FSSAI ಅಧಿಕಾರಿಗಳ ಸೂಚನೆ ಮೇರೆಗೆ ಚಾಕೊಲೇಟ್ ನ ಮಾದರಿಗಳನ್ನೂ ತಪಾಸಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಆಮದು ಚಾಕೊಲೇಟ್ ಗಳಿಗೆ ಬೇಡಿಕೆ ಹೆಚ್ಚಾಗಿರುವ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡದಿಂದ ಚಾಕೊಲೇಟ್ ಮಾದರಿಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ.
ಈ ಹಿಂದೆ ಕರ್ನಾಟಕ ಸರ್ಕಾರ ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಪಾನಿಪೂರಿ, ಕೆಬಾಬ್ ಮತ್ತು ಶವರ್ಮಾದಲ್ಲಿ ಕೃತಕ ಬಣ್ಣವನ್ನು ಬೆರೆಸುವುದನ್ನು ನಿಷೇಧಿಸಿತ್ತು. ರಸ್ತೆಬದಿಯ ಅಂಗಡಿಗಳಲ್ಲಿ ಸಿಗುವ ಚಹಾದಲ್ಲಿ ಅಧಿಕ ಪ್ರಮಾಣದ ಕೀಟನಾಶಕ ಮತ್ತು ಬಣ್ಣವನ್ನು ಬಳಕೆ ಮಾಡುತ್ತಿರುವುದು ಕಂಡು ಬಂದಿತು.