ಬೆಂಗಳೂರು: ಪಹಲ್ಗಾಮ್ ದಾಳಿಯಲ್ಲಿ ಅಮಾಯಕರ ಜೀವ ಪಡೆದ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್ ‘ ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ. ಉಗ್ರರಿಗೆ ಆಶ್ರಯ ನೀಡುವ ಪಾಕಿಸ್ತಾನ ಕ್ಕೆ ತಕ್ಕ ಪಾಠ. ನಮ್ಮ ತಂಟೆಗೆ ಬಂದರೆ ಉಗ್ರರಿಗೆ ಹಾಗೂ ಪಾಕಿಸ್ತಾನ ಕ್ಕೆ ಉಳಿಗಾಲ ಇಲ್ಲ ಎಂಬ ಸಂದೇಶ ರವಾನೆ ಯಾಗಿದೆ. ‘ನಮ್ಮ ಸೇನೆ ನಮ್ಮ ಹೆಮ್ಮೆ’ ಎಂದು ಹೇಳಿದ್ದಾರೆ. ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಹಾಗೂ ಭಯೋತ್ಪಾದಕ ಕೃತ್ಯ ಎಸಗುವ ಉಗ್ರಗಾಮಿ ಸಂಘಟನೆಗಳ ಹುಟ್ಟಡಗಿಸುವ ಹೋರಾಟದಲ್ಲಿ ನಾವೆಲ್ಲರೂ ಕೇಂದ್ರ ಸರ್ಕಾರದ ಜತೆ ಇದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಗಳಲ್ಲಿರುವ ಭಯೋತ್ಪಾದಕರ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ನಮ್ಮ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಸಾಧನೆಗೊಂದು ದೊಡ್ಡ ಸಲಾಂ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ನಮ್ಮ ಪಕ್ಷ, ನಮ್ಮ ಸರಕಾರ ಸಂಪೂರ್ಣ ಬೆಂಬಲಿಸಿದೆ. ದೇಶದ ಭದ್ರತೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೂ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಮೊದಲೇ ಹೇಳಿದ್ದೆವು. ಮುಂದೆಯೂ ಕೇಂದ್ರ ಸರ್ಕಾರದೊಂದಿಗೆ ನಮ್ಮ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಇರಲಿದೆ ಎಂದು ಹೇಳಿದರು.
ಭಯೋತ್ಪಾದಕರ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಸಾಹಸ ಮೆಚ್ಚುವಂಥದ್ದು, ಈ ಮೂಲಕ ಪಹಲ್ಗಾಮ್ ದಾಳಿಯಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತುಸು ನೆಮ್ಮದಿ ಸಿಕ್ಕಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಎಚ್ಚರ ವಹಿಸಿದೆ. ಭಯೋತ್ಪಾದನೆ ಎಂಬ ಪೀಡುಗಿನ ವಿರುದ್ಧ ಎಲ್ಲರೂ ಒಗ್ಗಟಾಗಿ ಹೋರಾಡೋಣ ಎಂದು ಸಚಿವರು ಹೇಳಿದ್ದಾರೆ.
ಆಪರೇಷನ್ ಸಿಂಧೂರಕ್ಕೆ ಬೈರತಿ ಸುರೇಶ್ ಪ್ರಶಂಸೆ:
ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಭಯೋತ್ಪಾದಕರ ಕುಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ದೇಶದ ಪರಾಕ್ರಮ ಮೆರೆದಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರನ್ನು ಮಟ್ಟ ಹಾಕಲು ನಮ್ಮ ಭಾರತೀಯ ಸೇನೆಯು ನಡೆಸಿರುವ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ನಡೆಸುವ ಮೂಲಕ ಶಕ್ತಿ ಪ್ರದರ್ಶನದ ಜೊತೆಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಈ ಮೂಲಕ ಭಯೋತ್ಪಾದನೆ ಮೂಲಕ ಭಾರತದ ಶಾಂತಿಗೆ ಧಕ್ಕೆ ತರಲು ಯತ್ನಿಸಿದರೆ ಉಳಿಗಾಲ ಇಲ್ಲ ಎಂಬ ಸಂದೇಶವನ್ನೂ ಪಾಕಿಸ್ತಾನಕ್ಕೆ ರವಾನಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಶಾಂತಿಪ್ರಿಯ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವ ಭಯೋತ್ಪಾದಕರನ್ನು ಹುಟ್ಟಡಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮತ್ತ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಂಬಲ ಸೂಚಿಸುತ್ತದೆ ಎಂದು ಬೈರತಿ ಸುರೇಶ್ ಹೇಳಿದ್ದಾರೆ.
ದೇಶದ ಸಾರ್ವಭೌಮತೆಗೆ ಚ್ಯುತಿ ಉಂಟು ಮಾಡುವಂತಹ ಯಾವುದೇ ಶಕ್ತಿಯನ್ನು ಭಾರತೀಯರಾದ ನಾವು ಸಹಿಸುವುದಿಲ್ಲ. ನಿರಂತರ ಹೋರಾಟ ನಡೆಸುವ ಮೂಲಕ ಇಂತಹ ಶಕ್ತಿಗಳನ್ನು ನಿರ್ಮೂಲನೆ ಮಾಡಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಬೈಯೋತ್ಪಾದಕರ 9 ನೆಲೆಗಳ ಮೇಲೆ ದಾಳಿ ನಡೆಸಿ ನಾಶಪಡಿಸಲಾಗಿದ್ದು, ಈ ಮೂಲಕ ನಮ್ಮ ಸೇನೆ ಅಮಾಯಕರ ಸಾವು ನೋವುಗಳನ್ನು ತಪ್ಪಿಸಿದ್ದಾರೆ. ಅತ್ಯಂತ ಚಾಣಾಕ್ಷ್ಯತನದಿಂದ ಈ ದಾಳಿಯನ್ನು ನಡೆಸಿರುವ ಪ್ರತಿಯೊಬ್ಬ ಸೈನಿಕನಿಗೂ ನಾನು ನಮ್ಮ ಸರ್ಕಾರದ ಪರವಾಗಿ ಮತ್ತು ನನ್ನ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.