ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್ ಗಳಿಗೆ ಹೆಚ್ಚಿಸಲು ಬದ್ಧ: ಡಿಕೆ ಶಿವಕುಮಾರ್‌

Most read

ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್ ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಸರ್ಕಾರ ಬದ್ಧ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, 2010 ರಲ್ಲಿ ಕೃಷ್ಣಾ ಜಲ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಸಂಬಂಧ ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯವು ನಾಲ್ಕು ರಾಜ್ಯ ಸರಕಾರದ ಪ್ರತಿನಿಧಿಗಳ ಸಭೆ ಕರೆದಿದೆ. ಈ ವಿಚಾರಕ್ಕೆ ಸಂಬಂಧಪಟ್ಟ ಸಚಿವರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಕಾನೂನು ತಜ್ಞರ ಜತೆಗೂ ಚರ್ಚೆ ಮಾಡಿದ್ದು, ಅವರು ತಮ್ಮ ಅಭಿಪ್ರಾಯ ನೀಡಲಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕೇಂದ್ರ ಸಚಿವಾಲಯದ ಸಭೆಯಲ್ಲಿ ನಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.

ಈ ಯೋಜನೆ ಜಾರಿಗೆ ಸರ್ಕಾರ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಅಗತ್ಯ ಅನುದಾನವನ್ನು ಮೀಸಲಿಡಲಾಗುತ್ತದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಲಾಭವಾಗಲೀ ಅಥವಾ ನಷ್ಟ ಆಗಲಿ. ನಾವು ಅಣೆಕಟ್ಟನ್ನು 524 ಮೀಟರ್ ಗಳಿಗೆ ಎತ್ತರಿಸಬೇಕು. ಅದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.

ಟನಲ್ ರಸ್ತೆ ಕುರಿತ ಪ್ರಶನೆಗೆ ಉತ್ತರಿಸಿದ ಅವರು “ಹೆಬ್ಬಾಳ ಜಂಕ್ಷನ್ ಬಹಳ ಮುಖ್ಯವಾದ ಜಾಗ. ಇಲ್ಲಿ ಮೆಟ್ರೋ ಹಾಗೂ ಟನಲ್ ರಸ್ತೆ ಅವಶ್ಯವಿದೆ. ಹೀಗಾಗಿ ನಾವು ಅಗತ್ಯವಿರುವ ಜಾಗವನ್ನು ಪಡೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ನಾವು ಯೋಜನೆಯಿಂದ ಹಿಂದೆ ಸರಿಯುವುದಿಲ್ಲ. ಮೆಟ್ರೋ ಹಾಗೂ ಟನಲ್ ರಸ್ತೆ ಅಧಿಕಾರಿಗಳು ಜತೆಯಾಗಿ ವಿನ್ಯಾಸ ಸಿದ್ಧಪಡಿಸುವಂತೆ ಸೂಚಿಸಿದ್ದೇವೆ. ಇದಕ್ಕೆ ಅಗತ್ಯವಿರುವ ಮಿಲಿಟರಿ ಜಾಗ ಹಾಗೂ ಖಾಸಗಿ ಜಾಗ ಎಷ್ಟು ಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ಟಿಡಿಆರ್ ಅಥವಾ ಎಫ್ ಎ ಆರ್ ಮೂಲಕ ಪರಿಹಾರ ನೀಡಲು ನಾವು ಬದ್ಧವಾಗಿದ್ದೇವೆ. ನಾವು ಈ ಜಾಗ ಬಿಟ್ಟು ಕೊಡಲು ಸಿದ್ದವಿಲ್ಲ‌. ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕಾಗಿದ್ದು, ಇದಕ್ಕೆ ಅಗತ್ಯವಿರುವ ಜಾಗದ ವಿಚಾರವಾಗಿ ನಾವು ಸಭೆ ಮಾಡಿದ್ದೇವೆ ಎಂದರು.

More articles

Latest article