ದಲಿತ ರಾಮದಾಸ್ ಗೆ ಪಿಎಚ್‌ ಡಿ ಮುಂದುವರೆಸಲು ಸುಪ್ರೀಂಕೋರ್ಟ್‌ ಅನುಮತಿ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಅಮಾನತುಗೊಂಡಿದ್ದ ವಿದ್ಯಾರ್ಥಿ

Most read

ಹೊಸದಿಲ್ಲಿ: ದುರ್ನಡತೆ ಹಾಗೂ ದೇಶದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪದಡಿಯಲ್ಲಿ ಮುಂಬೈ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯಿಂದ (ಟಿಐಎಸ್‌ಎಸ್) ಎರಡು ವರ್ಷಗಳ ಕಾಲ ಅಮಾನತುಗೊಂಡಿದ್ದ ಪಿಎಚ್‌ ಡಿ ಸಂಶೋಧಕ ವಿದ್ಯಾರ್ಥಿ ರಾಮದಾಸ್ ಪ್ರಿನಿ ಶಿವಾನಂದನ್‌ ಅವರಿಗೆ ಪಿಎಚ್‌ಡಿ ಅಧ್ಯಯನವನ್ನು ಮುಂದುವರಿಸುವುದಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತ ಮತ್ತು ಮನ ಮೋಹನ್‌ ಅವರಿದ್ದ ದ್ವಿಸದಸ್ಯಪೀಠ ಈ ಆದೇಶ ನೀಡಿದೆ. ರಾಮದಾಸ್ ಅವರನ್ನು 2024ರ ಏಪ್ರಿಲ್ 18ರಂದು ಟಿಐಎಸ್‌ ಎಸ್ ಅಮಾನತುಗೊಳಿಸಿತ್ತು.

ರಾಮದಾಸ್ ಅವರು ಕೇಂದ್ರ ನರೇಂದ್ರ ಮೋದಿ ಸರಕಾರದ ವಿರುದ್ಧ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆಯೋಧ್ಯೆ ವಿವಾದ ಕುರಿತ ಸಾಕ್ಷ್ಯಚಿತ್ರವೊಂದನ್ನು ಆಯೋಜಿಸಿದ್ದರು. ಈ ಎರಡೂ ಕಾರಣಗಳಿಗಾಗಿ ರಾಮದಾಸ್ ತನ್ನ ಯಾವುದೇ ಕ್ಯಾಂಪಸ್ ಅನ್ನು ಪ್ರವೇಶಿಸುವುದಕ್ಕೆ ಟಿಐಎಸ್‌ಎಸ್ ನಿಷೇಧ ವಿಧಿಸಿತ್ತು. ಅಮಾನತುಗೊಂಡ ನಂತರ ರಾಮದಾಸ್  ಅವರಿಗೆ ಫೆಲೋಶಿಪ್ ನೀಡುವುದನ್ನು ಸರ್ಕಾರ ನಿಲ್ಲಿಸಿತ್ತು. ಇವರು ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್‌ ಎಫ್‌ ಐನ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದಾರೆ.

ಅಮಾನತು ಆದೇಶವನ್ನು ಪ್ರಶ್ನಿಸಿ ರಾಮದಾಸ್ ಆರಂಭದಲ್ಲಿ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದರು. ಆದರೆ ಅವರ ಮನವಿಯನ್ನು ಅಲ್ಲಿನ ನ್ಯಾಯಾಲಯ ವಜಾಗೊಳಿಸಿ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆಸಲು ರಾಮದಾಸ್ ಅವರು ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಟಿಐಎಸ್‌ ಎಸ್‌ ನ ವಾದವನ್ನು ಎತ್ತಿಹಿಡಿದಿತ್ತು.

ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಮದಾಸ್ ಸುಪ್ರೀಂಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸರಕಾರಿ ಫೆಲೋಶಿಪ್‌ ಗಳನ್ನು ಪಡೆಯುವ ವಿದ್ಯಾರ್ಥಿಗಳು ಸರ್ಕಾರಗಳನ್ನು ಟೀಕಿಸುವುದರಿಂದ ದೂರವಿರಬೇಕೆಂಬ ಅಪಾಯಕಾರಿ ಸಂದೇಶವನ್ನು ಆಡಳಿತ ಸರ್ಕಾರ ತನ್ನನ್ನು ಅಮಾನತುಗೊಳಿಸುವ ಮೂಲಕ ನೀಡಿದೆ ಎಂದು ಅವರು ವಾದಿಸಿದ್ದರು. ದೇಶದ  ಶಿಕ್ಷಣ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಸರಕಾರವು ಪರಿಣಾಮಕಾರಿಯಾಗಿ ಹೊಸಕಿ ಹಾಕುತ್ತಿದೆ ಎಂದು ರಾಮದಾಸ್ ಅವರು ವಾದಿಸಿದ್ದರು.

ವಾದ ವಿವಾದಗಳನ್ನು ಆಲಿಸಿದ ನಂತರ ನ್ಯಾಯಪೀಠವು, ರಾಮದಾಸ್ ಅವರನ್ನು ಟಿಐಎಸ್‌ ಎಸ್ ಎರಡು ವರ್ಷಗಳ ಅವಧಿಗೆ ಅಮಾನತುಗೊಳಿಸಿದ್ದು, ಆ ಅವಧಿಯನ್ನು ಇಲ್ಲಿಗೇ ಮುಕ್ತಾಯಗೊಳಿಸಬೇಕು. ಪಿಎಚ್‌ ಡಿ ಮುಂದುವರೆಸಲು ಅವಕಾಶ ನೀಡಬೇಕು ಮತ್ತು ಸ್ಕಾಲರ್‌ ಶಿಪ್‌ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು.

ರಾಮದಾಸ ಅವರು ರಾಷ್ಟೀಯ ಶಿಕ್ಷಣ ನೀತಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಟಿಐಎಸ್‌ ಎಸ್ ಆವರಣದಲ್ಲಿ ಅಯೋಧ್ಯೆ ವಿವಾದ ಕುರಿತ ಆನಂದ್‌ ಪಟವರ್ಧನ್‌ ಅವ ರಾಮ್‌ ಕೆ ನಾಮ್‌ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಸುಪ್ರೀಂಕೋರ್ಟ್‌ ಆದೇಶವನ್ನು ರಾಮದಾಸ್‌ ಅವರು ಸ್ವಾಗತಿಸಿದ್ದು, ನಾನು ಮತ್ತೊಮ್ಮೆ ವಿದ್ಯಾರ್ಥಿಯಾಗಿದ್ದೇನೆ. ನನಗೆ ಪ್ರವೇಶ ನಿರಾಕರಿಸಿದ್ದ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ

More articles

Latest article