ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಿಯರಿಗೆ ನೀಡಿದ್ದ ವೀಸಾವನ್ನು ಭಾರತ ಸರ್ಕಾರ ರದ್ದುಗೊಳಿಸಿತ್ತು. ಆದರೆ ಈ ಪ್ರಕರಣದಲ್ಲಿ, ಬೆಂಗಳೂರಿನಲ್ಲಿ ನೆಲೆಸಿದ್ದ ಐಟಿ ಉದ್ಯೋಗಿ ಅಹ್ಮದ್ ತಾರೀಕ್ ಭಟ್ ಹಾಗೂ ಅವರ ಕುಟುಂಬದ ಗಡೀಪಾರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ಕುಟುಂಬದ ಆರು ಸದಸ್ಯರು ಹೊಂದಿರುವ ಭಾರತದ ಪಾಸ್‌ಪೋರ್ಟ್ ಮತ್ತು ಆಧಾರ್ ಗುರುತಿನ ಚೀಟಿಯನ್ನು ಸರ್ಕಾರದ ವಶಕ್ಕೆ ನೀಡಿ ದೇಶ ತೊರೆಯುವಂತೆ ಆದೇಶಿಸಲಾಗಿದೆ. ಇದಕ್ಕೆ ತಡೆ ನೀಡಬೇಕು ಎಂದು ಅಹ್ಮದ್ ತಾರೀಕ್ ಭಟ್ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.
ತಾರೀಕ್ ಭಟ್ ಅವರು ಕೇರಳದ ಕೊಯಿಕ್ಕೋಡ್ ನ ಐಐಎಂನಿಂದ ಎಂಬಿಎ ಪದವಿ ಪಡೆದಿದ್ದಾರೆ. ಇವರು ಸಲ್ಲಿಸಿರುವ ದಾಖಲೆ ಪರಿಶಿಲಿಸಿ, ಮುಂದಿನ ಆದೇಶದವರೆಗೂ ಯಾವುದೇ ಕ್ರಮ ಜರುಗಿಸದಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ ಎಂದು ತಿಳಿದು ಬಂದಿದೆ.
ಇದೊಂದು ಮಾನವೀಯ ಪ್ರಕರಣ ಎಂದು ಭಾವಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸುವಂತೆ ತಾರೀಕ್ ಭಟ್ ಅವರಿಗೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಕೇಂದ್ರ ಸರ್ಕಾರ ಪ್ರಶ್ನಿಸಿದ್ದು, ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಈ ಪ್ರಕರಣದಲ್ಲಿನ ತನ್ನ ಆದೇಶವು ಬೇರೆ ಯಾವುದೇ ಪ್ರಕರಣಗಳಿಗೆ ಅನ್ವಯಿಸುವಂತಿಲ್ಲ ಎಂದೂ ಸುಪ್ರೀಂ ಕೋರ್ಟ್ ತಿಳಿಸಿದೆ.
ಪಾಕಿಸ್ತಾನದ ಮೀರ್‌ಪುರ್ ನಲ್ಲಿ ಜನಿಸಿದ ನೀವು ಭಾರತಕ್ಕೆ ಬಂದಿದ್ದು ಹೇಗೆ ಎಂದು ನ್ಯಾಪೀಠದಲ್ಲಿದ್ದ ನ್ಯಾ. ಸೂರ್ಯ ಕಾಂತ್ ಅವರು ತಾರೀಕ್ ಭಟ್ ಅವರನ್ನು ಪ್ರಶ್ನಿಸಿದ್ದಾರೆ.
1997 ರಲ್ಲಿಯೇ ತಮ್ಮ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದು, ಶ್ರೀನಗರದಲ್ಲಿ ನೆಲೆಸಿದ್ದೆವು. ಪಾಕಿಸ್ತಾನ ಪಾಸ್‌ಪೋರ್ಟ್ ಅನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಒಪ್ಪಿಸಲಾಗಿದೆ. 2000ದಲ್ಲಿ ತಾರಿಕ್ ನಾವು ಮತ್ತು ನಮ್ಮ ಕುಟುಂಬದ ಸದಸ್ಯರು ಭಾರತದ ಪಾಸ್‌ಪೋರ್ಟ್ ಮತ್ತು ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದೆವು.. ಕುಟುಂಬದ ಎಲ್ಲಾ ಸದಸ್ಯರು ಉತ್ತಮ ಶಿಕ್ಷಣ ಪಡೆದಿದ್ದಾರೆ ಎಂಬ ಮಾಹಿತಿಯನ್ನು ತಾರಿಕ್ ಭಟ್ ನ್ಯಾಯಾಲಯಕ್ಕೆ ನೀಡಿದ್ದಾರೆ.
ನಾವು ಭಾರತೀಯರು ಎನ್ನುವುದಕ್ಕೆ ಅಗತ್ಯ ದಾಖಲೆಗಳಿವೆ. ನಮ್ಮ ಕುಟುಂಬದ ಎಲ್ಲಾ ಸದಸ್ಯರೂ ಆಧಾರ್ ಕಾರ್ಡ್ ಹೊಂದಿದ್ದಾರೆ. ಆದರೂ ಭಾರತ ತೊರೆಯುವಂತೆ ಗೃಹ ಸಚಿವಾಲಯ ಕಳೆದ ವಾರ ನೋಟಿಸ್ ಕಳುಹಿಸಿದೆ. ಭಾರತದ ವೀಸಾ ಪಡೆದು ಇಲ್ಲಿ ಅವಧಿ ಮೀರಿ ನೆಲೆಸಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ ಎಂದು ತಾರೀಕ್ ಭಟ್ ನ್ಯಾಯಾಲಯದ ಗಮನಕ್ಕೆ ತಂದರು.
ಏ.22 ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಬೆಂಬಲ ಪಡೆದಿರುವ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಮೃತಪಟ್ಟಿದ್ದರು. ಈ ಪ್ರಕರಣದ ನಂತರ ಕೇಂದ್ರ ಸರ್ಕಾರ ಪಾಕಿಸ್ತಾನ ನಾಗರಿಕರಿಗೆ ಭಾರತ ಬಿಟ್ಟು ಹೋಗುವಂತೆ ಖಡಕ್ ಸೂಚನೆ ನೀಡಿತ್ತು.