ಬೆಂಗಳೂರು: ಪುರುಷರಂತೆ ವೇಷ ಧರಿಸಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆಟೋ ಚಾಲಕಿ ಸೇರಿದಂತೆ ಇಬ್ಬರು ಮಹಿಳೆಯರನ್ನು ಬೊಮ್ಮನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಿಲೋಫರ್ (20) ಹಾಗೂ ಶಬೀನ್ ತಾಜ್ (32) ಬಂಧಿತ ಆರೋಪಿಗಳು. ಇವರಿಂದ 11 ಲಕ್ಷ ರೂ ಮೌಲ್ಯದ 130 ಗ್ರಾಂ. ಚಿನ್ನಾಭರಣ ಹಾಗೂ ಆಟೊವೊಂದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಲೋಫರ್ ಓರ್ವ ಅನಾಥೆ. ಈಕೆಯನ್ನು ಶಬೀನ್ ತಾಜ್ ಸಾಕಿ ಸಲುಹಿದ್ದಳು. ಜತೆಗೆ ಇನ್ನೂ ಇಬ್ಬರು ಅನಾಥ ಮಕ್ಕಳನ್ನು ಈಕೆ ಬೆಳಸಿದ್ದಾಳೆ. ಇವರೆಲ್ಲರನ್ನೂ ತನ್ನ ಅಪರಾಧ ಕೃತ್ಯಗಳಲ್ಲಿ ಬಳಸಿಕೊಳ್ಳುತ್ತಿದ್ದಳು. ಈಕೆ ಜನ ಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಅಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಶಬೀನ್ ತಾಜ್ ಓಡಾಡುತ್ತಿದ್ದದ್ದು ಪತ್ತೆಯಾಗಿತ್ತು. ಈ ಆಧಾರದ ಮೇಲೆ ಇವರನ್ನು ಬಂಧಿಸಲಾಗಿದೆ.
ನಿಲೋಫರ್ ಪುರುಷ ವೇಷ ಧರಿಸಿ ಆಟೊ ಚಲಾಯಿಸುತ್ತಿದ್ದಳು. ಆಟೊ ಚಲಾಯಿಸುತ್ತಲೇ ಮನೆ, ಅಂಗಡಿಗಳಲ್ಲಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದಳು. ಕಳೆದ ವರ್ಷ ಮನೆಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದಳು. ಈಕೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದರು. ಜೈಲಿನಿಂದ ಹೊರಬಂದ ಬಳಿಕ ಶಬೀನ್ ತಾಜ್ ಜತೆ ಸೇರಿದ್ದ ನಿಲೋಫರ್, ಮತ್ತೆ ಕಳ್ಳತನವನ್ನು ಮುಂದುವರೆಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಮಾರ್ಚ್ 17ರಂದು ಇಬ್ಬರೂ ಆರೋಪಿಗಳು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯ ಬೀಗ ಮುರಿದ 130 ಗ್ರಾಂ. ಚಿನ್ನಾಭರಣ ಹಾಗೂ ರೂ.3 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಮನೆ ಮಾಲೀಕರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮೈಕೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿಯೂ ಮನೆ ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು ಮಾಡಿದ ಆಭರಣಗಳನ್ನು ಡಿ.ಜೆ.ಹಳ್ಳಿ, ಟ್ಯಾನರಿ ರಸ್ತೆಯಲ್ಲಿರುವ ಆಭರಣ ಅಂಗಡಿಗಳಲ್ಲಿ ಅಡಮಾನ ಇಡುತ್ತಿದ್ದರು. ಇವರು ಅಡ ಇಟ್ಟಿದ್ದ ಅಂಗಡಿಗಳಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.