ಮಂಗಳೂರು: ರೈಲ್ವೆ ನೇಮಕಾತಿ ಮಂಡಳಿ ನಡೆಸುತ್ತಿರುವ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ವಿ. ಸೋಮಣ್ಣ ಎಕ್ಸ್ ಮೂಲಕ ತಿಳಿಸಿದ್ದಾರೆ.
ಇತ್ತೀಚೆಗೆ ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಪ್ರವೇಶಪತ್ರದಲ್ಲಿ ಉಲ್ಲೇಖಿಸಿತ್ತು. ಈ ವಿಷಯ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ.
ಏಪ್ರಿಲ್ 28, 29 ಮತ್ತು 30 ರಂದು ರೈಲ್ವೆ ಇಲಾಖೆಯಲ್ಲಿ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿದೆ. ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ವಿಷಯವನ್ನು ಪರೀಕ್ಷಾ ನಿಯಮದಲ್ಲಿ ಉಲ್ಲೇಖಿಸಲಾಗಿದೆಯೆಂಬ ದೂರುಗಳು ನನಗೆ ಬಂದಿದೆ. ಈ ಬಗ್ಗೆ, ಸಂಸದರು, ಶಾಸಕರು ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು.
ಈ ವಿಷಯದ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಗೊಂದಲ ನಿವಾರಿಸಲಾಗಿದೆ ಎಂದು ಸೋಮಣ್ಣ ಹೇಳಿದ್ದಾರೆ. ಇತರ ಎಲ್ಲಾ ಪರೀಕ್ಷಾ ನಿಯಮವನ್ನು ಪಾಲಿಸಿ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯುವಂತೆ ಮನವಿ ಮಾಡುತ್ತೇನೆ. ಅಭ್ಯರ್ಥಿಗಳು ಗೊಂದಲಕ್ಕೀಡಾಗಬಾರದೆಂದು ಮನವಿ ಮಾಡಿದ್ದಾರೆ.
ರೈಲ್ವೇ ಇಲಾಖೆಯ ಮಾರ್ಗಸೂಚಿಗೆ ಹಲವು ಸಂಘಟನೆಗಳು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಇತ್ತೀಚಿಗೆ ನಡೆದ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯುವ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳ ಜನಿವಾರ ತೆಗೆಸಿದ್ದು ದೊಡ್ಡ ವಿವಾದವಾಗಿತ್ತು.