ಪ್ರಧಾನಿಗಳೇ ಯುದ್ಧ ನಿರಾಕರಿಸಿದ್ದನ್ನು ಕರ್ನಾಟಕದ ಬಿಜೆಪಿಯವರು ಮರೆತರೇ?

Most read

ಪ್ರಧಾನಿಗಳೇ ಯುದ್ಧವನ್ನು  ಬಲವಾಗಿ ನಿರಾಕರಿಸಿದ್ದನ್ನು ಮರೆತಿರುವ ಕರ್ನಾಟಕದ ಬಿಜೆಪಿ ನಾಯಕಮಣಿಗಳು ಬುದ್ಧ ನೆಲೆಯಲ್ಲೆ ಯುದ್ಧವನ್ನು ತಾತ್ವಿಕವಾಗಿ ನಿರಾಕರಿಸಿದ ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ಮತ್ತು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ರವಿಕುಮಾರ್‌ ಟೆಲೆಕ್ಸ್‌, ಪತ್ರಕರ್ತರು.‌

ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ಜನರ ಸಾವಿನ ಸಂಬಂಧ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಯುದ್ಧದ ಪರವಾಗಿಲ್ಲ ಎಂದ ಹೇಳಿಕೆಯನ್ನೆ ಮಹಾಪರಾಧವೆಂಬಂತೆ ಖಂಡಿಸತೊಡಗಿರುವ ಬಿಜೆಪಿ ನಾಯಕರು ಅಸಲಿಗೆ ಕೇಂದ್ರಸರ್ಕಾರದ ಭದ್ರತಾ ಲೋಪವನ್ನು, ಗುಪ್ತಚರ ಇಲಾಖೆಯ ವಿಫಲತೆಯನ್ನು ಮರೆಮಾಚುವ ಪ್ರಯತ್ನ ನಡೆಸಿದ್ದಾರೆ.

ಇಂತಹ ಸಂದರ್ಭದಲ್ಲಿ ಯಾವುದೇ ಸರ್ಕಾರವಿದ್ದರೂ ಏಕಾಏಕಿ ಯುದ್ಧವನ್ನು ಸಾರುವುದು ಅಸಾಧ್ಯ. ರಾಜತಾಂತ್ರಿಕ ಕ್ರಮಗಳಿಂದ ಶತ್ರು ರಾಷ್ಟ್ರವನ್ನು ಮೊದಲು ಜಾಗತಿಕ ಮಟ್ಟದಲ್ಲಿ ಕಟಕಟೆಗೆ ನಿಲ್ಲಿಸಬೇಕಾಗುತ್ತದೆ. ಇದು ಮೋದಿ ಸರ್ಕಾರಕ್ಕೆ ಗೊತ್ತಿಲ್ಲವೆಂದೇನಲ್ಲ. ಪುಲ್ವಾಮದಲ್ಲಿ ಸೈನಿಕರ ಮಾರಣಹೋಮ ನಡೆದಾಗ ಇದೇ ಪ್ರಧಾನಿ ನರೇಂದ್ರಮೋದಿ ಅವರು ಇದಕ್ಕೆ ಕಾರಣವಾದ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿದ್ದರಾ? ಸರ್ಜಿಕಲ್ ಸ್ಟ್ರೈಕ್ ಎಂಬ ಎಚ್ಚರಿಕೆಯ ಸೈನಿಕ ಕಾರ್ಯಾಚರಣೆಗೆ ಸೀಮಿತವಾಗಿ ಪಾಕಿಸ್ತಾನವನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದರು.

ಉಳಿದದೆಲ್ಲಾ ರಾಜತಾಂತ್ರಿಕ ಕ್ರಮಗಳನ್ನೇ ಅವಲಂಬಿಸಿದ್ದನ್ನು ಯುದ್ಧ ಯುದ್ಧ ಎಂದು ಘೀಳಿಡುವವರು ಮರೆತಂತಿದೆ.

ಪೆಹಲ್ಗಾಮ್ ದಾಳಿ ನಡೆದಿರುವ ಈ ಹೊತ್ತಿನಲ್ಲಿ  ಪ್ರಧಾನಮಂತ್ರಿಗಳು ಉಗ್ರರಿಗೆ ತಕ್ಕ ಪಾಠ ಕಲಿಸುವ ಅಬ್ಬರದ ಭಾಷಣ ಮಾಡಿದ್ದಾರೆಯೇ ಹೊರತು ಉಳಿದಂತೆ ಉಗ್ರರ ಪೋಷಿಸುತ್ತಿರುವ ಪಾಕ್ ವಿರುದ್ಧ ರಾಜತಾಂತ್ರಿಕ ಕ್ರಮಗಳನ್ನು ಬೀಸಿದೆ. ಯುದ್ಧ ಮಾಡುವ ನಿರ್ಧಾರ ಬಿಜೆಪಿ ನೇತೃತ್ವದ  ಎನ್ ಡಿ ಎ ಸರ್ಕಾರದ್ದೇ ಆಗಿರುವಾಗ , ಈ ಬಗ್ಗೆ ಯಾವುದೇ ನಿರ್ಧಾರವನ್ನು  ಇದುವರೆಗೂ ಕೈಗೊಂಡಿಲ್ಲದಿರುವಾಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಯುದ್ಧದ ಪರವಾಗಿಲ್ಲ ಎಂದ ಮಾತ್ರಕ್ಕೆ ಅವರನ್ನು ಪಾಕ್ ಪರ, ಸಾಬರ ಪರ  ಎಂದು ಕಟಕಟೆಗೆ ನಿಲ್ಲಿಸಲು ಹೊರಟಿರುವ ಕರ್ನಾಟಕದ ಬಿಜೆಪಿ ನಾಯಕರು ಎಂದಿನಂತೆ ಮತೀಯ ರಾಜಕಾರಣಕ್ಕಿಳಿದಿದ್ದಾರೆ.

ಈ ಬಿಜೆಪಿ ನಾಯಕರು  ಮೊದಲು ಮೋದಿಯವರು ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲಿ ಎಂದು ಯಾಕೆ ಆಗ್ರಹಿಸಬಾರದು? ಯುದ್ಧ ನಡೆಸುವಂತೆ ರಾಜ್ಯ ಬಿಜೆಪಿ  ನಿರ್ಣಯ ಕೈಗೊಂಡು ತಮ್ಮ ನಾಯಕ ಮೋದಿ ಅವರಿಗೆ ಯಾಕೆ ಒತ್ತಾಯಿಸಬಾರದು?

ಅದಿರಲಿ,

ಇತ್ತೀಚೆಗೆ ಪೋಲೆಂಡ್ -ಭಾರತ ನಡುವಿನ ರಾಜತಾಂತ್ರಿಕ ಸಂಬಂಧ ವಾರ್ಷಿಕೋತ್ಸವದಲಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಾ ಭಾರತ ಬುದ್ಧ ಪರಂಪರೆಯ ನೆಲ, ಈ ಜಗತ್ತಿಗೆ ಭಾರತ ಶಾಂತಿಧೂತ “ಬುದ್ಧ” ನನ್ನು ಕೊಟ್ಟಿದೆ ಹೊರತು, “ಯುದ್ಧ” ವನ್ನಲ್ಲ . ಯುದ್ಧ ದ ಮಾತು ಬಂದಾಗ ಭಾರತ ಶಾಂತಿಯನ್ನು ಪ್ರತಿಪಾದಿಸುತ್ತದೆ.

( India has given “Bhuddha” to the world not “Yuddha” which means it was always given peace and prosperity (ಜುಲೈ10, 2024) ಎಂದು ಹೇಳುವ ಮೂಲಕ ಜಾಗತಿಕ ವೇದಿಕೆಯಲ್ಲಿ  ಅಪಾರ ಚಪ್ಪಾಳೆಗಳನ್ನು ಸ್ವೀಕರಿಸಿದ್ದರು.

ವಿದೇಶಗಳ ನೆಲದಲ್ಲಿ ನಿಂತು ಮಾತನಾಡುವಾಗ ಮೋದಿ ಅವರು ಶಾಂತಿಯ ಬಗ್ಗೆ ಮಾತಾಡುತ್ತಾರೆ. ಮಾನವತೆ ದೊಡ್ಡ ಅಪಾಯದಲ್ಲಿದೆ. ಆದರೂ ಭಾರತ (ಅಕ್ಟೋಬರ್ 17, 2024 ವಿಯನ್ನ) ರಾಜತಾಂತ್ರಿಕ ಕ್ರಮಗಳಿಗೆ ಒತ್ತು ನೀಡುತ್ತದೆ. ಭಾರತಕ್ಕೆ ಬುದ್ಧನ ಅಸ್ಮಿತೆ ಇದೆ. ಯುದ್ಧಕ್ಕಿಂತ ರಾಜತಾಂತ್ರಿಕ ಕ್ರಮ ಮತ್ತು ಸಂವಾದಗಳಿಗೆ ಒತ್ತು ನೀಡುತ್ತದೆ ಎನ್ನುತ್ತಾರೆ.

2023 ರಲ್ಲಿ ಜಿ. 20 ಸಭೆಯಲ್ಲಿ ಮಾತನಾಡುತ್ತಾ ಭಾರತ ಯುದ್ಧವನ್ನು ಬೆಂಬಲಿಸುವುದಿಲ್ಲ. ನಾವು ಗಾಂಧಿ ಮತ್ತು ಬುದ್ಧನ ಮಾರ್ಗದಲ್ಲಿ  ನಡೆವವರು ಎಂದು ನಮ್ಮ  ಪ್ರಧಾನಿ ಘೋಷಿಸುತ್ತಾರೆ.

ನಮ್ಮ ಪ್ರಧಾನಿಗಳೇ ಹೀಗೆ ಯುದ್ಧವನ್ನು  ಬಲವಾಗಿ ನಿರಾಕರಿಸಿದ್ದನ್ನು ಮರೆತಿರುವ ಕರ್ನಾಟಕದ ಬಿಜೆಪಿ ನಾಯಕಮಣಿಗಳು ಬುದ್ಧ ನೆಲೆಯಲ್ಲೆ ಯುದ್ಧವನ್ನು ತಾತ್ವಿಕವಾಗಿ ನಿರಾಕರಿಸಿದ ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ಮತ್ತು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ರವಿಕುಮಾರ್‌ ಟೆಲೆಕ್ಸ್‌

ಪತ್ರಕರ್ತರು

ಇದನ್ನೂ ಓದಿ- ಮಾಧ್ಯಮಗಳ ಯುದ್ಧೋನ್ಮಾದ ಹಾಗೂ ಜಲದಿಗ್ಬಂಧನ ದುಸ್ಸಾಹಸ

More articles

Latest article