ಬಸವ ಮತ್ತು ರೇಣುಕಾ ಜಯಂತಿಯನ್ನು ಜಂಟಿಯಾಗಿ ಆಚರಿಸಬೇಕೆಂಬ ಸುತ್ತೋಲೆ ವಾಪಸ್‌ ಪಡೆದ ಶಂಕರ ಬಿದರಿ

Most read

ಬೆಂಗಳೂರು: ವಿವಾದ ಸೃಷ್ಟಿಯಾದ ನಂತರ ಮತ್ತು ಸಾಕಷ್ಟು ಟೀಕೆಗಳು ಕೇಳಿ ಬಂದ ನಂತರ ಬಸವ ಜಯಂತಿ ಮತ್ತು ರೇಣುಕಾ ಜಯಂತಿಯನ್ನು ಜಂಟಿಯಾಗಿ ಆಚರಿಸಬೇಕೆಂಬ ತನ್ನ ವಿವಾದಾತ್ಮಕ ಆದೇಶವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹಿಂಪಡೆದಿದೆ.

ಮಾಜಿ ಬೆಂಗಳೂರು ಪೊಲೀಸ್‌ ಆಯುಕ್ತ ಹಾಗೂ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಬಸವ ಜಯಂತಿ ಮತ್ತು ರೇಣುಕಾ ಜಯಂತಿಯನ್ನು ಜಂಟಿಯಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದ್ದರು. ಈ ಆದೇಶದ ಬಳಿಕ ಲಿಂಗಾಯತ ಮುಖಂಡರು ಹಾಗೂ ಭಕ್ತರು ಸಚಿವ ಈಶ್ವರ ಖಂಡ್ರೆ ಹಾಗೂ ಮಹಾಸಭಾ ಅಧ್ಯಕ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ಸಂಪರ್ಕಿಸಿ ಕಳವಳ ವ್ಯಕ್ತಪಡಿಸಿದ್ದರು. ಎರಡೂ ಆಚರಣೆಗಳನ್ನು ಒಟ್ಟಿಗೆ ಆಚರಿಸುವುದು ಸಾಂಸ್ಕೃತಿಕ ಸಂಪ್ರದಾಯಗಳನ್ನು ಅಗೌರವಗೊಳಿಸುವುದು ಮಾತ್ರವಲ್ಲದೆ ಸಮುದಾಯದ ಏಕತೆಗೆ ಭಂಗ ಉಂಟಾಗುತ್ತದೆ ಎಂದು ಸಮುದಾಯದ ಮುಖಂಡರು ಎಚ್ಚರಿಸಿದ್ದರು. ಅಂತಿಮವಾಗಿ ಮಹಾಸಭಾ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಮಹಾಸಭಾದ ಕಾರ್ಯದರ್ಶಿ ರೇಣುಕಾಪ್ರಸನ್ನ ಸ್ಪಷ್ಟನೆ ನೀಡಿದ್ದು, ಏಪ್ರಿಲ್ 2ರ ಬಸವ ಜಯಂತಿ ಮತ್ತು ರೇಣುಕಾ ಜಯಂತಿಯನ್ನು ಜಂಟಿಯಾಗಿ ಆಚರಿಸಬೇಕೆಂಬ ಸುತ್ತೋಲೆಯನ್ನು ಹಿಂಪಡೆದಿದ್ದೇವೆ, ಬಸವ ಜಯಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ, ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

More articles

Latest article