ಬೆಂಗಳೂರು: ಅಮೆಜಾನ್ ಕಂಪನಿಯ ಉದ್ಯೋಗಿಯೊಬ್ಬರು ಮನೆಯ ಟೆರೇಸ್ ನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ದೇವಸಂದ್ರದ ನೇತ್ರಾವತಿ ಲೇ ಔಟ್ ನಲ್ಲಿ ನಡೆದಿದೆ. ನೇತ್ರಾವತಿ ಲೇಔಟ್ ನಿವಾಸಿ 38 ವರ್ಷದ ಗೋಪಾಲ್ ಸಿಂಗ್ ಮೃತ ಉದ್ಯೋಗಿ. ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಕೆ.ಆರ್.ಪುರದ ನೇತ್ರಾವತಿ ಲೇ ಔಟ್ನಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದರು.
ತಡರಾತ್ರಿವರೆಗೂ ಸಹೋದರಿ ಮತ್ತು ಪಾಲಕರ ಜತೆ ಟೆರೇಸ್ ಮೇಲೆ ಗೋಪಾಲ್ ಸಿಂಗ್ ಮಾತನಾಡುತ್ತಾ ಕುಳಿತುಕೊಂಡಿದ್ದರು. ಸ್ವಲ್ಪ ಹೊತ್ತಿನ ನಂತರ ಮೇಲಿನ ಬಾಗಿಲು ಹಾಕಿಕೊಂಡು ಬರುತ್ತೇನೆ. ನೀವು ಹೋಗಿ ಮಲಗಿಕೊಳ್ಳಿ ಎಂದು ಪೋಷಕರನ್ನು ರೂಂಗೆ ಕಳುಹಿಸಿದ್ದರು. ಬಳಿಕ ಟೆರೇಸ್ ಮೇಲೆ ವಾಕಿಂಗ್ ಮಾಡುತ್ತಾ ಕಾಲು ಜಾರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಗೋಪಾಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಅವರ ಕುಟುಂಬದವರೇ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಸಾವು ಕುರಿತು ತಮಗೆ ಅನುಮಾನಗಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕೆ.ಆರ್.ಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.