ಹೈದರಾಬಾದ್: ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ವೀಲಿನ ಮಾಡಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆಗ್ರಹಪಡಿಸಿದ್ದಾರೆ. ಪಹಲ್ಗಾಮ್ ದಾಳಿ ಖಂಡಿಸಿ ಹೈದರಾಬಾದ್ ನಲ್ಲಿ ಕಳೆದ ರಾತ್ರಿ ನಡೆದ ಮೊಂಬತ್ತಿ ಬೆಳಕಿನ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
1971 ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಪಾಕಿಸ್ತಾನವನ್ನು ಬಗ್ಗುಬಡಿದು ವಾಜಪೇಯಿ ಸೇರಿದಂತೆ ಹಲವರಿಂದ ದುರ್ಗೆ ಎಂಬ ಬಿರುದು ಪಡೆದಿದ್ದರು. ಅಂತಹ ಇಚ್ಛಾ ಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೋರಿಸುವ ಸಮಯ ಬಂದಿದೆ. ಈಗ ಅವರಿಗೆ ಪ್ರತ್ಯುತ್ತರ ನೀಡುವ ಸಮಯ ಬಂದಿದೆ. ಇಡೀ ದೇಶ ಮತ್ತು 140 ಕೋಟಿ ಭಾರತೀಯರು ನಿಮ್ಮ ಜೊತೆ ಇದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಇದೆ ಎಂದು ಅವರು ತಿಳಿಸಿದ್ದಾರೆ.
ಇದು ರಾಜಕೀಯ ಮಾಡುವ ಸಮಯ ಅಲ್ಲ.ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿದವರಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆ ಎಂದು ಕಿಡಿ ಕಾರಿದರು. ಪ್ರತಿಭಟನೆಯಲ್ಲಿ ಸಂಸದ ಅಸಾದುದ್ದೀನ್ ಓವೈಸಿ, ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.