ಬೆಂಗಳೂರು: ಮಾವಿನ ಹಣ್ಣಿನ ಸೀಸನ್ ಬಂದೇ ಬಿಟ್ಟಿದೆ. ಈಗಾಗಲೇ ಹತ್ತಾರು ಬಗೆಯ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಕಾಣಬಹುದು. ಮಾವಿನ ಹಣ್ಣಿನ ಗುಣಮಟ್ಟ ಉತ್ತಮವಾಗಿದೆ ಆದರೆ ಇಳುವರಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಎನ್ನುತ್ತಾರೆ ಮಾವು ಬೆಳೆಗಾರರು.
ಈ ವರ್ಷ 8-10 ಲಕ್ಷ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ. ಆದರೆ ಕಳೆದ ವರ್ಷ 12-15 ಲಕ್ಷ ಟನ್ ಇಳುವರಿ ಬಂದಿತ್ತು. ವಾತಾವರಣ ಏರುಪೇರು, ಹೆಚ್ಚಿದ ಉಷ್ಣಾಂಶ, ಹಣ್ಣು ಬಿಡುವಾಗ ಹೆಚ್ಚಿದ ತಾಪಮಾನ ಮತ್ತು ಕೆಲವು ರೋಗಗಳಿಂದಾಗಿ ಇಳುವರಿ ಕಡಿಮೆಯಾಗಿದೆ.
ರಾಜ್ಯದಲ್ಲಿ 2.8 ಲಕ್ಷ ರೈತರು ಸುಮಾರು 1.5 ಲಕ್ಷ ಹೆಕ್ಟೇರ್ ನಲ್ಲಿ ಮಾವು ಬೆಳೆದಿದ್ದಾರೆ. ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ.60 ರಷ್ಟು ಮಾವು ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಮಾವು ಕೃಷಿ ಕಂಡು ಬರುತ್ತದೆ.
ಕೆಲವು ಜಿಲ್ಲೆಗಳ ಮಾವು ಮಾರುಕಟ್ಟೆಗೆ ಆಗಮಿಸಿದ್ದು, ಮೂರನೇ ಎರಡರಷ್ಟು ಮಾವು ಬೆಳೆಯುವ ಕೋಲಾರ ಜಿಲ್ಲೆಯ ಮಾವು ತಡವಾಗುತ್ತಿದೆ. ರಾಜ್ಯದ ಒಟ್ಟು ಉತ್ಪಾದನೆಯ ಶೇ 35 ರಷ್ಟು ಮಾವು ರಾಜ್ಯದಲ್ಲಿಯೇ ಬಳಕೆಯಾಗುತ್ತದೆ. ಶೇ.30-35 ರಷ್ಟು ಮಾವು ಹೊರ ರಾಜ್ಯಗಳಿಗೆ ಆಮದಾಗುತ್ತದೆ. ಶೇ.25ರಷ್ಟು ಹಾಳಾಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ. ಕೇವಲ ಶೇ.1ರಷ್ಟು ಮಾತ್ರ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು ಹೇಳುವುದೇನೆಂದರೆ ಬೇಗ ಹೂ ಕಟ್ಟಿದ್ದರಿಂದ ಬೇಗ ಫಸಲು ಬಂದಿದೆ. ಬೇಸಿಗೆ, ಬಿಸಿಲು ಮತ್ತು ಉಷ್ಣತೆ ಹೆಚ್ಚಾಗಿದ್ದ ಕಾರಣ ಫೆಬ್ರವರಿಯಲ್ಲಿ ಎರಡನೇ ಹಂತದ ಹೂ ಕಟ್ಟುವ ಪ್ರಕ್ರಿಯೆ ಕಡಿಮೆಯಾಗಿದೆ. ಒಟ್ಟಾರೆ ನೋಡುವುದಾದರೆ ಉತ್ತಮ ಇಳುವರಿಗೆ ಮೋಸ ಇಲ್ಲ. ಜೂನ್ ವೇಳೆಗೆ ಮಾರುಕಟ್ಟೆಗೆ ಹೆಚ್ಚಿನ ಮಾವು ಬರಲಿದೆ ಎನ್ನುತ್ತಾರೆ.
ಆದರೆ ರೈತರಿಗೆ ಸಂಪೂರ್ಣ ತೃಪ್ತಿ ತಂದಿದೆ ಎನ್ನುವಂತಿಲ್ಲ. ರ ಅನಿಸಿಕೆಗಳೇ ಬೇರೆ. ಕೋಲಾರ ಜಿಲ್ಲೆಯ ಪ್ರಮುಖ ಬೆಳೆಗಾರರಾದ ರಮೇಶ್ ರೆಡ್ಡಿ ಅವರು, ಈ ವರ್ಷ ಈಗಾಗಲೇ ಶೇ 10 ರಷ್ಟು ಇಳುವರಿ ನಷ್ಟವಾಗಿದೆ. ರೋಗಳಿಂದಾಗಿ ಶೇ.30 ರಷ್ಟು ಇಳುವರಿ ಕಡಿಮೆಯಾಗಲಿದೆ. ಹೀಗಾಗಿ ಪ್ರತಿ ಎಕರೆಗೆ ಎರಡರಿಂದ ಮೂರು ಟನ್ ಮಾವು ಕಡಿಮೆಯಾಗಲಿದೆ ಎನ್ನುತ್ತಾರೆ. ಇಡೀ ಕೋಲಾರ ಜಿಲ್ಲೆಯಲ್ಲಿ 32 ಸಾವಿರ ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದ್ದು, 10 ಲಕ್ಷ ಟನ್ ಇಳುವರಿ ಬರಬೇಕಿತ್ತು. ಆದರೆ ಈ ವರ್ಷ 5 ಲಕ್ಷ ಟನ್ ಮಾತ್ರ ಕಾಣಬಹುದು ಎನ್ನುವುದು ಅವರ ಅಭಿಪ್ರಾಯ.