ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಸೌಂದರ್ಯ ಕೆಡಲು ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳ ಕೊಡುಗೆಯೇ ಅಧಿಕ. ವಿವಿಧ ರೀತಿಯ ಕಾನೂನು ಕಟ್ಟಲೆಗಳನ್ನು ಮಾಡಿದರೂ ಜಾಹೀರಾತುಗಳ ಹಾವಳಿ ಕಡಿಮೆಯಾಗಿಲ್ಲ. ದಂಡ ವಿಧಿಸುತ್ತೇವೆ, ಕೇಸ್ ಜಡಿಯುತ್ತೇವೆ ಎಂದರೂ ಭಯವಿಲ್ಲ. ಜಾಹೀರಾತುಗಳ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ರಾಜಕಾರಣಿಗಳದ್ದು. ಇವರಿಗಂತೂ ಕಾನೂನಿನ ಭಯವೇ ಇಲ್ಲ.
ಹಾಗಾಗಿ ಇನ್ನು ಮುಂದೆ ಜಾಹೀರಾತುಗಳನ್ನು ಅಳವಡಿಸುವವರು, ಅದರಲ್ಲಿರುವ ವ್ಯಕ್ತಿಗಳು ಮತ್ತು ಮುದ್ರಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ, ತೆರವಿನ ಸಂಪೂರ್ಣ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲು ಅನುವಾಗುವ ಪರಿಷ್ಕೃತ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್ ಒ ಪಿ) ಬಿಬಿಎಂಪಿ ಜಾರಿಗೊಳಿಸುತ್ತಿದೆ.
ಮುಖ್ಯ ಆಯುಕ್ತರು ಲಿಖಿತ ಅನುಮತಿ ನೀಡದ ಹೊರತು ಪ್ರಿಂಟಿಂಗ್ ಪ್ರೆಸ್ ನವರು ಯಾವುದೇ ರೀತಿಯ ಜಾಹೀರಾತುಗಳನ್ನು ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿ ಮುದ್ರಿಸಿದರೆ ಅವರ ಪರವಾನಗಿ ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ಹಾಕಲು ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿ ಕಾಯ್ದೆ 2020ರ ಅನ್ವಯ ಪಾಲಿಕೆ ವ್ಯಾಪ್ತಿಯ ಯಾವುದೇ ಕಟ್ಟಡ, ಭೂಮಿ, ರಚನೆ, ಗೋಡೆ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ಆಯುಕ್ತರ ಲಿಖಿತ ಅನುಮತಿಯಿಲ್ಲದೆ ಫ್ಲೆಕ್ಸ್, ಬ್ಯಾನರ್, ಕಟೌಟ್ ಹಾಗೂ ಯಾವುದೇ ರೀತಿಯ ಜಾಹೀರಾತುಗಳನ್ನು ಅಳವಡಿಸುವಂತಿಲ್ಲ.
ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಲಯದ ಜಂಟಿ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ಹಾಗೂ ವಲಯ ಆಯುಕ್ತರನ್ನು ಮೇಲ್ವಿಚಾರಣೆ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡಗಳು 24/7 ಕಾರ್ಯನಿರ್ವಹಿಸಲಿವೆ. ಹೊಯ್ಸಳ ಮತ್ತು ಇತರೆ ಪೊಲೀಸ್ ಗಸ್ತು ಸಿಬ್ಬಂದಿ ಗಸ್ತು ತಿರುಗುವಾಗ ಫ್ಲೆಕ್ಸ್ ಬ್ಯಾನರ್ ಕಟೌಟ್ ಗಳು ಕಂಡುಬಂದಲ್ಲಿ ಅಂತಹವರನ್ನು ಕಾನೂನಿನ ಪ್ರಕಾರ ಸ್ಥಳದಲ್ಲೇ ಬಂಧಿಸಲಾಗುತ್ತದೆ. ಬಿಬಿಎಂಪಿ ಜಾಹೀರಾತು ನಿಯಂತ್ರಣ ತಂಡ ಬ್ಯಾನರ್ ಕಟೌಟ್ ತೆರವುಗೊಳಿಸಿ ಎಫ್ಐಆರ್ ದಾಖಲಿಸಲಿದೆ.