ಚಾಮರಾಜನಗರ: ಜಿಲ್ಲೆಯಲ್ಲಿ ವನ್ಯಜೀವಿಗಳು ಅದರಲ್ಲೂ ಹೆಚ್ಚಾಗಿ ಚಿರೆತಗಳು ಮಾನವ ಆವಾಸಸ್ಥಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಚಾಮರಾಜನಗರ ಜಿಲ್ಲೆ ಶೇ. 48 ರಷ್ಟು ಅರಣ್ಯ ಪ್ರದೇಶ ಹೊಂದಿದೆ. ಆದರೂ ಚಿರತೆಗಳು ಅರಣ್ಯಪ್ರದೇಶಗಳಿಗಿಂತ ತೋಟಗಳು, ಪಾಳುಬಿದ್ದ ಜಮೀನುಗಳು ಮತ್ತು ಕಬ್ಬಿನ ಹೊಲಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಎರಡು ದಿನಗಳ ಹಿಂದೆಯಷ್ಟೇ ಜಿಲ್ಲಾ ಕೇಂದ್ರದಿಂದ ಹತ್ತು ಕಿ.ಮಿ ದೂರದಲ್ಲಿರುವ ನಂಜದೇವನಪುರ ಹಾಗೂ ವೀರನಪುರ ವ್ಯಾಪ್ತಿಯಲ್ಲಿ ಚಿರೆತಗಳು ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದೆ ಚಾಮರಾಜನಗರ ನಗರ ಪುರಸಭೆಯ ವ್ಯಾಪ್ತಿಯಲ್ಲಿರುವ ಕರಿನಂಜನಪುರ ಮತ್ತು ಕೆಂಪನಾಪುರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದವು.
ಈ ಪ್ರಕ್ರಿಯೆಗೆ ಕಾರಣಗಳಿಲ್ಲದಿಲ್ಲ. ಮಿತಿ ಮೀರುತ್ತಿರುವ ಅರಣ್ಯನಾಶ, ಮತ್ತು ಆಹಾರ ಸಿಗದೆ ಇರುವುದು ಕಾಡಿನ ಪ್ರಾಣಿಗಳು ನಾಡಿನಲ್ಲಿ ಗೋಚರಿಸಲು ಕಾರಣ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಡುತ್ತಾರೆ.
ಈ ಚಿರತೆಗಳು ಆಹರ ಹುಡುಕಿಕೊಂಡೇ ಬರುತ್ತಿದ್ದು., ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ಕೆಲವು ತಿಂಗಳ ಹಿಂದೆಯೂ ಜಿಲ್ಲೆಯ ಹುಲ್ಲೇಪುರ ಮತ್ತು ಕೊಡಗಪುರದಲ್ಲಿ ಸಾಕು ಪ್ರಣಿಗಳನ್ನು ಚಿರತೆಗಳು ಕೊಂದು ಹಾಕಿದ್ದವು. ಕೆಲವು ವಾರದ ಹಿಂದೆ ಚಾಮರಾಜನಗರ ತಾಲ್ಲೂಕಿನ ಮಾದಲವಾಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಮೃತಪಟ್ಟಿತ್ತು. ಶಿವಕುಮಾರ್ ಎಂಬುವರ ಜಮೀನಿನಲ್ಲಿರುವ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿತ್ತು.
ಜನರ ಆಕ್ರೋಶ ಅದೆಷ್ಟು ಕಟ್ಟೆಯೊಡದಿದೆ ಎಂದರೆ ನಿಮ್ಮ ಪರಿಹಾರ ಬೇಡ, ಚಿರತೆ ಅಥವಾ ಯಾವುದೇ ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಸಾಕು ಪ್ರಾಣಿಗಳನ್ನು ಬೇಟೆಯಾಡದಂತೆ ನೋಡಿಕೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಘೇರಾವ್ ಮಾಡಿರುವ ಪ್ರಕರಣಗಳೂ ವರದಿಯಾಗಿವೆ.
ಜಿಲ್ಲೆಯ ಅರಣ್ಯ ಭೂಮಿಗೆ 140 ಕ್ಕೂ ಹೆಚ್ಚು ಹಳ್ಳಿಗಳು ಹೊಂದಿಕೊಂಡಿವೆ. ಈ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಕೃಷಿ ಚಟುವಟಿಕೆಗಳನ್ನು ನಡೆಸಲು ಜಮೀನುಗಳಿಗೆ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಮತ್ತು ಚಿರತೆ ಕಾರ್ಯಪಡೆಯು ಅಲ್ಲಲ್ಲಿ ಚಿರತೆಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಬಲೆಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸಿದೆಯಾದರೂ ಚಿರತೆಗಳ ಹಾವಳಿ ಕಡಿಮೆಯಾಗಿಲ್ಲ. ಅರಣ್ಯ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಬೇಕು ಎಂದು ರೈತಸಂಘದ ಮುಖಂಡರು ಆಗ್ರಹಪಡಿಸುತ್ತಲೇ ಇದ್ದಾರೆ. ಇನ್ನಾದರೂ ಕೃಷಿಕರ ವೇದನೆ ಇವರಿಗೆ ಅರ್ಥವಾದೀತೇ ಎಂದು ಕಾದು ನೋಡಬೇಕಷ್ಟೇ.