ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಜಾತಿ ಜನಗಣತಿಯನ್ನು ಮುನ್ನೆಲೆಗೆ ತಂದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕುರ್ಚಿಗೆ ಆಪತ್ತು ಬಂದಿಲ್ಲ. ಅವರ ಸ್ಥಾನ ಭದ್ರವಾಗಿದೆ. ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಸಬೇಕೆಂದು ಯಾರೂ ಹೇಳಿಲ್ಲ. ನಮ್ಮ ಶಾಸಕರು ಮತ್ತು ಹೈಕಮಾಂಡ್ ಸಿದ್ದರಾಮಯ್ಯ ಅವರ ಬೆಂಬಲಕ್ಕಿದ್ದಾರೆ ಎಂದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಗೂ ಜಾತಿ ಜನಗಣತಿ ವರದಿಗೂ ಸಂಬಂಧವೇ ಇಲ್ಲ. ಮುಡಾ ಕೇಸ್ ಅನ್ನು ಇ.ಡಿಗೆ ವಹಿಸಿದರೂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿ ಬರುವುದಿಲ್ಲ. ನ್ಯಾಯಾಲಯಕ್ಕೆ ಅಪೀಲು ಹೋಗುತ್ತೇವೆ. ಮುಡಾ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಆದ್ದರಿಂದ ಸಿದ್ದರಾಮಯ್ಯ ಅವರು ಹೆದರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
‘ಇ.ಡಿ ಉದ್ದೇಶಪೂರ್ವಕವಾಗಿ ಹಿಂಸೆ ನೀಡುತ್ತಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇವೆ. ಇ.ಡಿ ತನಿಖೆ ನಡೆಯುತ್ತಿರುತ್ತದೆ. ಸಿದ್ದರಾಮಯ್ಯ ಅವರೂ ಮುಂದುವರಿಯುತ್ತಾರೆ. ಮುಡಾ ಕೇಸನ್ನು ಸಿಬಿಐಗೆ ವಹಿಸಿದರೂ ಆಕ್ಷೇಪವಿಲ್ಲ. ತಪ್ಪು ಮಾಡಿಲ್ಲ ಎಂದಾದರೆ ಹೆದರುವುದಾದರೂ ಏಕೆ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಮೇಲ್ವರ್ಗಗಳಿಗೆ ಅನ್ಯಾಯ ಮಾಡುತ್ತಾರೆ ಎನ್ನುವುದು ಸುಳ್ಳು ಆರೋಪ. ಜಾತಿ ಗಣತಿಯಿಂದ ಎಲ್ಲ ವರ್ಗಗಳಿಗೂ ಅನುಕೂಲ ಆಗುತ್ತದೆಯೇ ಹೊರತು ಯಾರಿಗೂ ಅನ್ಯಾಯವಾಗುವುದಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತದೆ. ಲಕ್ಷಾಂತರ ಶಿಕ್ಷಕರು ಜನಗಣತಿಯಲ್ಲಿ ತೊಡಗಿಸಿಕೊಂಡಿದ್ದರು. ಮೋಸ ಮಾಡಿ ಎಂದು ಅಷ್ಟೂ ಶಿಕ್ಷಕರಿಗೆ ಸಿಎಂ ಹೇಳಲು ಸಾಧ್ಯವೇ? ಸಾಕ್ಷಿಗಳಿಲ್ಲದೆ ಯಾರ ಮೇಲೂ ಗೂಬೆ ಕೂರಿಸಬಾರದು ಎಂದು ತಿಳಿಸಿದರು.
ವಿದ್ಯಾರ್ಥಿಯ ಜನಿವಾರ ತೆಗೆಸಿದ್ದು ತಪ್ಪು. ಸರ್ಕಾರ ಮತ್ತು ನಾವು ಖಂಡಿಸಿದ್ದೇವೆ. ಜನಿವಾರ ಅಥವಾ ಹಿಜಾಬ್ ಯಾವುದೇ ಆಗಿರಲಿ ತೆಗಸಿದ್ದು ತಪ್ಪು ಎನ್ನುವುದರಲ್ಲಿ ಎರಡು ಮಾತಿಲ್ಲ. ಜನಿವಾರ ತೆಗೆಸಿದರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ ಎಂದು ಆರೋಪಿಸಿದರು.